ಮುಂಬಯಿ : ಸುಮಾರು 28 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕ ಸಂಘ ಮುಂಬಯಿ ಇದರ ಸಾಂಸ್ಕೃತಿಕ ಸಮುಚ್ಚಯದ ಕುರಿತು ಮಾಹಿತಿ ನೀಡುವ ಪುಸ್ತಿಕೆ ’ನಮ್ಮ ಯೋಜನೆ ತಮ್ಮ ಮುಂದೆ’ ಇದರ ಬಿಡುಗಡೆ ಸಮಾರಂಭವು ಅ. 17ರಂದು ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಜರಗಿತು.

ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇದರ ಗೌ. ಪ್ರ. ಕಾರ್ಯದರ್ಶಿ ಶಂಕರ ಹಲಗತ್ತಿ ಯವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ ಕನ್ನಡ ಬಾಷೆ, ಸಂಸ್ಕೃತಿಯನ್ನು ಮಹಾನಗರದಲ್ಲಿ ಪಸರಿಸುವ ಕಾರ್ಯವನ್ನು ಮಾಡುತ್ತಿರುವ ಕರ್ನಾಟಕ ಸಂಘದ ಈ ನೂತನ ಕಟ್ಟಡ ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಉಪಾಧ್ಯಕ್ಷ ಬಿ. ಜಿ. ನಾಯಕ್ ಅವರು ಸಂಘದ ಪದಾಧಿಕಾರಿಗಳು ಶ್ರೀಮಂತರಲ್ಲದಿದ್ದರೂ ಶ್ರೀಮಂತ ಮನಸ್ಸಿನವರಾಗಿದ್ದು ಈ ಯೋಜನೆಯು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ಬರವಸಿಯಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಓಂದಾಸ್ ಕನ್ನಂಗಾರ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ವಿಶೇಷ ಸೌಲಭ್ಯಗಳೊಂದಿಗೆ ಈ ನೂತನ ಸಭಾಗೃಹವನ್ನು ನೀಡಲಿದ್ದು ಈ ಯೋಜನೆಗೆ ಎಲ್ಲಾ ಕನ್ನಡಿಗರು ಸ್ಪಂದಿಸುವ ಅಗತ್ಯವಿದ್ದು, ತಮ್ಮೆಲ್ಲರ ಸಹಕಾರದಿಂದ ನಮ್ಮ ಕನಸು ನನಸಾಗಲಿ ಎಂದರು.
ಗೌ. ಕೋಶಾಧಿಕಾರಿ ಎಂ.ಡಿ. ರಾವ್, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯ ಎಂ,ಎಂ, ಕೋರಿ ಉಪಸ್ಥಿತರಿದ್ದರು. ಡಾ. ಭರತ್ ಕುಮಾರ್ ಪೊಲಿಪು ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನಗೊಂಡಿತು.



