ಬಂಟ್ವಾಳ: ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಮಹಿಳೆ ಯಾವುದೇ ವಿಚಾರವನ್ನು ಮುಕ್ತವಾಗಿ ಚರ್ಚೆ ಮಾಡಲು ಹಿಂಜರಿಯುವುದರಿಂದಲೇ ಮಹಿಳೆಯರು ಸಮಾಜದಲ್ಲಿ ಹಿಂದುಳಿಯಲು ಕಾರಣವಾಗುತ್ತಿದೆ. ಮಹಿಳಾ ಗ್ರಾಮ ಸಭೆಗಳಲ್ಲಿ ಭಾಗವಹಿಸುವ ಮೂಲಕ ಮಹಿಳೆಯರು ತಾವು ಎದುರಿಸುವ ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡು ಕೊಳ್ಳ ಬಹುದಾಗಿದೆ ಎಂದು ಅಮ್ಟಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಅಮ್ಟಾಡಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ 2015-16ನೇ ಸಾಲಿನ ಮಹಿಳಾ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ತ್ರೀ ಶಕ್ತಿ ಗುಂಪುಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಲ್ಲಿ ಕಾನೂನಿನ ಅರಿವು ಕಾಣಬಹುದಾಗಿದೆ. ಸಂಸಾರವನ್ನು ನಡೆಸಿಕೊಂಡು ಹೋಗುವ ಮಹಿಳೆ ಸಮಾಜದಲ್ಲೂ ತನ್ನ ಜವಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದಾಗ ಮಹಿಳಾ ಗ್ರಾಮಸಭೆಗಳು ಅರ್ಥಪೂರ್ಣವಾಗಲು ಸಾಧ್ಯ ಎಂದರು.
ಜಿ.ಪಂ.ಸದಸ್ಯೆ ನಳಿನಿ ಶೆಟ್ಟಿ ಮಾತನಾಡಿ ಮಹಿಳಾ ದೌಜ್ರ್ಯನ್ಯ ತಡೆ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ, ಮನೆಯೊಳಗಿನ ಸಮಸ್ಯೆಗಳನ್ನು ನ್ಯಾಯಾಲಯದ ಮೆಟ್ಟಿಲು ಹತ್ತಲು ಬಿಡದೆ ಆದಷ್ಟು ಮನೆಯಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಅನ್ನಪೂರ್ಣ ಹಾಗೂ ನ್ಯಾಯಾವಾದಿ ವಿನೋದ ಸಂಪನ್ಮೂಲ ವ್ಯಕಿಗಳಾಗಿ ಭಾಗವಹಿಸಿದ್ದರು. ತಾ.ಪಂ.ಸದಸ್ಯ ಎಫ್ರಂ ಸಿಕ್ವೇರಾ, ಗ್ರಾ.ಪಂ.ಉಪಾಧ್ಯಕ್ಷೆ ಯಶೋಧಾ, ಸದಸ್ಯರಾದ ರತಿ ಭಂಡಾರಿ, ಚಂದ್ರಾವತಿ, ಐರಿನ್ ಡಿಸೋಜಾ, ಮೋಹಿನಿ, ರತ್ನಾವತಿ ಮಾರ್ಲ, ಶ್ರೀಮತಿ ಶೆಟ್ಟಿ, ದೇವದಾಸ್, ವಿಶ್ವನಾಥ, ಪಿಡಿಓ ಮಹಮ್ಮದ್, ಲೆಕ್ಕ ಪರಿಶೋಧಕ ಶಿವಪ್ಪ, ಮತ್ತಿತರರು ವೇದಿಕೆಯಲ್ಲಿ ಹಾಜರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಸ್ವಾಗತಿಸಿ ವಂದಿಸಿದರು. ಬಳಿಕ ಕುರಿಯಾಳ ಸ್ತ್ರೀ ಶಕ್ತಿ ಗೊಂಚಲಿನ ಸರ್ವಸದಸ್ಯರ ಸಭೆ ನಡೆಯಿತು.
