ಮುಂಬಯಿ: ಮುಂಬಯಿಯಾದ್ಯಂತ ಗಣೇಶ ಚತುರ್ಥಿ ಸಂಭ್ರಮವು ಶಾಸ್ತ್ರೋಕ್ತವಾಗಿ ಆಚರಿಸಲಾಗಿದ್ದು, ಮಹಾನಗರದಲ್ಲಿನ ವಿವಿಧ ತುಳುಕನ್ನಡಿಗ ಸಂಸ್ಥೆಗಳು ವಾರ್ಷಿಕ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭನೆಯಿಂದ ನೆರವೇರಿಸಿದವು.
ಜಿ.ಎಸ್.ಬಿ ವಡಲಾ ಗಣಪತಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಲದಿಂದ ಮುಂಬಯಿಗೆ ಆಗಮಿಸಿ ಸಾರ್ವಜನಿಕ ಶ್ರೀ ಗಣಪತಿ ಉತ್ಸವಕ್ಕೆ ವಿಶ್ವ ಪ್ರಸಿದ್ಧಿಯ ವಡಲಾದ ಶ್ರೀ ರಾಮಮಂದಿರ ದ್ವಾರಕಾನಾಥ ಭವನದಲ್ಲಿ ಇಂದಿಲ್ಲಿ ಅದ್ದೂರಿಯಾಗಿ ಗಣೇಶ ಚತುರ್ಥಿ ಆಚರಿಸಲ್ಪಟ್ತಿತು. ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶೋತ್ಸವ ಹೆಸರಾಂತ ಈ ಉತ್ಸವವನ್ನು ಮುಂಬಯಿಯಲ್ಲಿನ ಗೌಡ ಸಾರಸ್ವತ ಬ್ರಾಹ್ಮಣರು (ಜಿಎಸ್‍ಬಿ) ಪ್ರಥಮವಾಗಿ 1955ನೇ ಇಸವಿಯಲ್ಲಿ ಸಣ್ಣ ಪ್ರಮಾಣದಲ್ಲಿ ಪೂಜಿಸಿ ಆರಂಭಿಸಿದ್ದರು. 2014ರಲ್ಲಿ ವಜ್ರಮಹೋತ್ಸವ (ಸ್ಥಾಪನಾ 60 ವರ್ಷ) ಗಣಪತಿ ಉತ್ಸವ ಆಚರಿಸಿ ಸಾರ್ವಜನಿಕ ಶ್ರೀ ಗಣಪತಿ ಮಂಡಲಗಳಲ್ಲೇ ಜಗತ್ಪಸಿದ್ಧಿ ಪಡೆದಿದೆ. ಇಂದಿಲ್ಲಿ ಗುರುವಾರ ವಿಜಯನಾಮ ಸಂವತ್ಸರದ ಗಣೇಶೋತ್ಸವು ಭಾದ್ರಪದ ಶುಕ್ಲ ಚೌತಿಯಂದು ಗಣಪತಿ ಸಂಭ್ರಮ ಶುಭಾರಂಭಗೊಂಡಿದ್ದು ಕನಕ-ಬೆನಕ ಅಥವಾ ಬಂಗಾರದ ಗಣಪ ಅಥವಾ ಸ್ವರ್ಣ ಗಣಪತಿ ಎಂದು ಸಂಬೋದಿಸಲ್ಪಡುವ ಸ್ವರ್ಣಮಯ `ಗಜಮುಖ’ನ ದರ್ಶನ ಭಾಗ್ಯ ಪಡೆಯಲು ಲಕ್ಷಾಂತರ ಭಕ್ತರು
ಕಾತುರತೆಯಿಂದ ಕಾದು ವಿನಾಯಕನ ದರ್ಶನ ಪಡೆದು ಧಣ್ಯರೆಣಿಸಿದರು. ಅನಂತ ಚತುರ್ಧಶಿ ದಿನ ಈ ಸಂಭ್ರಮ ಮುಕ್ತಾಯಗೊಳ್ಳಲಿದ್ದು, ಸಂಭ್ರಮದಲ್ಲಿ ಗಣೇಶೋತ್ಸವ ಸಂಭ್ರಮದ ಮುಂದಾಳುಗಳಾದ ಎನ್.ಎನ್ ಪಾಲ್, ಎಂ.ವಿ ಕಿಣಿ, ಉಲ್ಲಾಸ್ ಡಿ.ಕಾಮತ್, ಗೋವಿಂದ್ ಎಸ್.ಭಟ್, ಸುಭಾಶ್ ಪೈ, ಸುನೀಲ್ ಪೈ, ಅಕ್ಷಯ್ ಪೈ, ಕಮಲಾಕ್ಷ ಸರಾಫ್ ಮತ್ತಿತರರು ಉಪಸ್ಥಿತರಿದ್ದರು.
ಬಂಟರ ಸಂಘ ಮುಂಬಯಿ: ಬಂಟರ ಸಂಘ ಮುಂಬಯಿ ವತಿಯಿಂದ ಸಂಘದ ಆವರಣದಲ್ಲಿನ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಮಾರ್ಗದರ್ಶನದಲ್ಲಿ ಶ್ರೀ ಮಹಾವಿಷ್ಣು ಮಂದಿರದಲ್ಲಿ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ ನೇತೃತ್ವದಲ್ಲಿ ಗಣೇಶ ಚತುರ್ಥಿ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮಂದಿರದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ಪೂಜಾಧಿಗಳನ್ನು ನೆರವೇರಿಸಿದರು. ಪೂರ್ವಾಹ್ನ ನಡೆಸಲಾದ ಗಣಹೋಮದಲ್ಲಿ ಸಿಟಿ ಪ್ರಾದೇಶಿಕ ವಿಭಾಗದ ಸುರೇಶ್ ಶೆಟ್ಟಿ ಪರಿವಾರವು ಪೂಜಾಧಿಗಳಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಲಂಕಾರ ಸೇವೆಗೈದ ಹರೀಶ್ ವಾಸು ಶೆಟ್ಟಿ, ಸಂಘದ ಸದಸ್ಯತ್ವ ಸಂಗ್ರಹ ಸಮಿತಿ ಕಾರ್ಯಧ್ಯಕ್ಷ ಎನ್.ಸಿ ಶೆಟ್ಟಿ, ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಭಂಡಾರಿ ಕುರ್ಲಾ-ಭಾಂಡೂಪ್ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಕಾರ್ಯಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಸಿಟಿ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಕಾರ್ಯಧ್ಯಕ್ಷ ಭುಜಂಗ ಶೆಟ್ಟಿ, ಸಂಘದ
ವ್ಯವಸ್ಥಾಪಕ ವಾರಂಗ ಪ್ರವೀಣ್ ಎಸ್.ಶೆಟ್ಟಿ, ಮತ್ತಿತರ ಪದಾಧಿಕಾರಿಗಳು, ಬೊಳ್ನಾಡುಗುತ್ತು ಶ್ವೇತಾ ಚಂದ್ರಹಾಸ್, ಕುರ್ಲಾ ದಿವಾಕರ ಶೆಟ್ಟಿ, ಕೆ.ಕೆ ಶೆಟ್ಟಿ, ಶರತ್ ಶೆಟ್ಟಿ, ಶಶಿಕಲಾ ಎನ್.ಶೆಟ್ಟಿ, ಗೀತಾ ಆರ್.ಶೆಟ್ಟಿ ಮತ್ತಿತರಭಕ್ತರು ಉಪಸ್ಥಿತರಿದ್ದರು.

ಮುಂಬಯಿ ಕನ್ನಡ ಸಂಘ: ಮಹಾನಗರದಲ್ಲಿ ಸುಮಾರು ಎಂಟು ದಶಕಗಳ ಹಿಂದೆ ಸ್ಥಾಪಿಸಲ್ಪಟ್ಟ ಮುಂಬಯಿ ಕನ್ನಡಸಂಘ (ರಿ.) ವತಿಯಿಂದ ಸಂಘದ ಕಛೇರಿಯಲ್ಲಿ ವಿಘ್ನವಿನಾಯಕನನ್ನು ಪೂಜಿಸಲಾಯಿತು. ಪುರೋಹಿತ ಸಂಜೀವ ಆಚಾರ್ಯ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯನ್, ಗೌ| ಪ್ರ| ಕಾರ್ಯದರ್ಶಿ ಸತೀಶ್ ಎನ್.ಬಂಗೇರ, ಪುಸ್ತಕ ಭಂಡಾರದ ಅಧಿಕಾರಿ ಎಸ್.ಕೆ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರು ಅಸೋಸಿಯೇಶನ್ ಮುಂಬಯಿ: ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯ ವತಿಯಿಂದ ಸಂಘದ ಭವನದಲ್ಲಿ ಶ್ರೀ ಗೌರಿಗಣಪತಿಯನ್ನು ಪೂಜಿಸಲಾಯಿತು. ಪುರೋಹಿತ ಶ್ರೀನಿವಾಸ ರಾವ್ ಪೂಜಾಧಿಗಳನ್ನು ನೆರವೇರಿಸಿ ಹರಸಿದರು. ಈ ಸಂದರ್ಭದಲ್ಲಿ ಸಂಘದ ಭವಾನಿ ಭರ್ಗವ, ಜಿ.ಎಸ್ ನಾಯಕ್, ಸುಧಾ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.












