ಬಂಟ್ವಾಳ: ನೀನೇನು ಬ್ರಾಹ್ಮಣನೋ..? ಕ್ಷತ್ರಿಯನೋ..? ಎಂದು ಹೀಯಾಳಿಸುತ್ತಾ ಆ ವ್ಯಕ್ತಿ ಬಾಲಕನಿಗೆ ಹಲ್ಲೆ ನಡೆಸುತ್ತಿದ್ದರೆ, ಬಾಲಕನ ಅಳು ಜೋರಾಗುತಿತ್ತು. “ಇಲ್ಲ ಇನ್ನು ಉಪ್ಪದ್ರ ಮಾಡ್ತಿಲ್ಲೆ” ಎನ್ನುತ್ತಿದ್ದ ಆ ಬಾಲಕನ ಅಸಹಾಯಕ ಸ್ಥಿತಿ ಕರುಣಾಜನಕವಾಗಿತ್ತು.
ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ..!ಅಸ್ಪ್ರಶ್ಯತೆಯಿಲ್ಲ, ಜಾತಿಬೇಧವಿಲ್ಲ, ನಮ್ಮದು ಬುದ್ದಿವಂತರ ಜಿಲ್ಲೆ ಎಂದು ಬೀಗುವ ದಕ್ಷಿಣಕನ್ನಡದಲ್ಲಿ ಇಂತಹ ಮಾತುಗಳು, ಅಮಾನವೀಯ ನಡವಳಿಕೆಗಳು ಇದೆ ಎಂದರೆನಂಬಲಸಾಧ್ಯ. ಆದರೆ ನಂಬಲೇ ಬೇಕು..
ಕಳೆದ ಎರಡು ತಿಂಗಳ ವಿಟ್ಲದಲ್ಲಿ ಮಕ್ಕಳಿಗೆಂದು ಆಯೋಜಿಸಲಾಗಿದ್ದ ವೇದಪಾಠದ ಶಿಬಿರದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ದೃಶ್ಯಾವಳಿಗಳು ಇದೀಗ ತಡವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಘಟನೆ ವಿವರ;
ಕೆಲ ಸಮಯದ ಹಿಂದೆ ವಿಟ್ಲದ ದೇವಸ್ಥಾನವೊಂದರಲ್ಲಿ ಮಕ್ಕಳಿಗಾಗಿ ವೇದಪಾಠದ ಶಿಬಿರವನ್ನು ಆಯೋಜಿಸಲಾಗಿತ್ತು. ವಿಟ್ಲ ಪರಿಸರ ಸೇರಿದಂತೆ ವಿವಿಧೆಡೆಗಳಿಂದ ಹಲವು ವಿದ್ಯಾರ್ಥಿಗಳು ಇಲ್ಲಿ ವೇದಪಾಠ ಕಲಿಕೆಗೆ ಬಂದಿದ್ದರು. ಈ ಸಂದರ್ಭ ವಿಟ್ಲ ಕಸ್ಬಾ ಗ್ರಾಮದ ಕಾಶಿಮಠ ಎಂಬಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೊಬ್ಬ ಅಶಿಸ್ತಿನಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ ವೇದಪಾಠ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ದೇವಸ್ಥಾನದಿಂದ ಹೊರಗೆಳೆದುಕೊಂಡು ಬಂದು ವಿದ್ಯಾರ್ಥಿಯ ಎರಡೂ ಕಿವಿಯನ್ನು ಹಿಂಡಿ ಅಮಾನುಷ ರೀತಿಯಲ್ಲಿ ವರ್ತಿಸಿರುವುದು ದೃಶ್ಯಾವಳೀಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ವೀಡಿಯೋದಲ್ಲಿ ಕಾಣುವಂತೆ ಬಾಲಕನ ಬಲ ಕೈಗೆ ಬ್ಯಾಂಡೇಜ್ ಹಾಕಲಾಗಿದ್ದು, ಆ ನೋವಿನ ಒತ್ತಡದಲ್ಲಿ ಬಾಲಕನನ್ನು ಎಳೆದೊಯ್ದು ಹಲ್ಲೆ ನಡೆಸಿರುವ ಅಮಾನವೀಯತೆ ವಿಡಿಯೋ ಕ್ಲಿಪ್ ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಧನಿಯೇರಿಸಿ ಮಾತನಾಡುವ ಆ ಶಿಕ್ಷಕ ನೀನೇನು ಬ್ರಾಹ್ಮಣನೇ ಅಥವಾ ಕ್ಷತ್ರಿಯನೇ ಎಂಬ ಪ್ರಶ್ನೆಗಳನ್ನೂ ಕೇಳಿರುವುದು ಪ್ರಜ್ಞಾವಂತರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಈ ಘಟನೆ ನಡೆದು ಹಲವು ಸಮಯ ಕಳೆದಿದ್ದರೂ, ವಿದ್ಯಾರ್ಥಿ ಪೋಷಕರಾಗಲಿ, ಘಟನೆಗೆ ಸಾಕ್ಷಿಯಾದವರಾಗಲಿ ಘಟನೆಯ ಬಗ್ಗೆ ಆಕ್ಷೇಪ ವೆತ್ತಿಲ್ಲ. ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿರುವ ಈ ದೃಶ್ಯಾವಳಿಗಳನ್ನು ಕಂಡು ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಈ ಬಗ್ಗೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕನ ಮೇಲೆ ಮೃಗೀಯವಾಗಿ ಹಲ್ಲೆನಡೆಸಿದ ಶಿಕ್ಷಕ ಪುತ್ತೂರಿನ ಜ್ಯೋತಿಷಿ ಸೋಮಸುಂದರ್ ಶಾಸ್ತ್ರಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದು, ಈ ಬಗ್ಗೆ ಶುಕ್ರವಾರ ಸಾರ್ವಜನಿಕರ ಸಹಕಾರದಲ್ಲಿ ವಿಟ್ಲದಲ್ಲಿ ಮೌನ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *