ಬಂಟ್ವಾಳ; ಪ್ರತೀ ವರ್ಷ ಒಂದಲ್ಲ ಒಂದು ಹೊಸತನದ ಸ್ತಬ್ಧಚಿತ್ರದ ಮೂಲಕ ಕಲ್ಲಡ್ಕದ ಶ್ರೀ ರಾಮ ಮಂದಿರದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಯುವ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಗಮನಸೆಳೆಯುವ ಕಲ್ಲಡ್ಕ ಶಿಲ್ಪಾಗೊಂಬೆ ಬಳಗ ಈ ಬಾರಿ ಪ್ರಸ್ತುತ ಪಡಿಸಿದ “ಮಲೆಮಾದೇಶ್ವರನ ಜಾತ್ರಾ ಮಹೋತ್ಸವ” ದ ಟ್ಯಾಬ್ಲೋ ನೋಡುಗರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.


ಸಾಮಾನ್ಯವಾಗಿ ಸ್ತಬ್ಧಚಿತ್ರ ವೆಂದರೆ ಅದು ಚಲನೆಯಿಲ್ಲದ ಕಲಾಕೃತಿ. ಆದರೆ ಸ್ತಬ್ಧಚಿತ್ರದ ಹೆಸರಿನಲ್ಲಿ ಶಿಲ್ಪಾಗೊಂಬೆ ಬಳಗ ಪ್ರದರ್ಶಿಸಿದ್ದು ವಿಶಿಷ್ಟ ಶೈಲಿಯ ಚಲನಶೀಲ ಕಲಾಕೃತಿ. ಹೌದು ಆ ಟ್ರಕ್ನಲ್ಲಿ 10 ಅಡಿ ಎತ್ತರದ ಮಲೆಮಾದೇಶ್ವರ(ಶಿವ)ನ ಮೂರ್ತಿ ಗಮನಸೆಳೆದರೆ , ಶಿವನ ಸಾನಿಧ್ಯದಲ್ಲಿ ಜಾತ್ರಾಮಹೋತ್ಸವದ ನೆಪದಲ್ಲಿ 7 ತಂಡಗಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಕರ್ನಾಟಕದ ವೈವಿಧ್ಯತೆಯನ್ನು ಎತ್ತಿ ಹಿಡಿಯಿತು.
ಜಾತ್ರಾ ಸಂಭ್ರಮದ ಅರ್ಥಪೂರ್ಣ ನಿರೂಪಣೆಯ ಜೊತೆಗೆ ಮಾದೇಶ್ವರನಿಗೆ ಊರ ಹಿರಿಯರಿಂದ ಪುಷ್ಪಾರ್ಚನೆ ಯೊಂದಿಗೆ ಕಲಾಪ್ರದರ್ಶನಗಳು ಆರಂಭಗೊಂಡರೆ ಬಳಿಕ ಮೈಸೂರು ತಂಡದಿಂದ ಜೋಗಯ್ಯ ನೃತ್ಯ, ಭಕ್ತಿ ರಸಮಂಜರಿ, ತುಮಕೂರು ಜಿಲ್ಲೆಯ ತಂಡದಿಂದ ವೀರಗಾಸೆ, ಬೆಂಗಳೂರು ಸಂತರ ತಂಡದ ಭಕ್ತಿ ಪ್ರಧಾನ ರೂಪಕ, ಹಾಸನದ ಗೀಗಿ ಬಳಗದ ಕಲಾವಿರಿಂದ ಗೀಗೀಪದ, ಏಳುಮಲೆ ನೃತ್ಯ ನಡೆದು ಕೊನೆಯದಾಗಿ ಕೋಲಾರ ತಂಡದಿಂದ ನಂದಿ ಕುಣಿತ ಹಾಗೂ ಪೂಜಾಕುಣಿತ ಜಾತ್ರೆಯ ರಂಗನ್ನು ಇಮ್ಮಡಿಗೊಳಿಸಿತ್ತು.
ಇದೆಲ್ಲಾ ನಡೆದದ್ದು ಟ್ರಕ್ಕಿನ ಮೇಲೆ ಅನ್ನುವುದೇ ಇದರ ವಿಶೇಷತೆ. ಟ್ರಕ್ಕಿನ ಹಿಂಭಾಗದಲ್ಲಿ ಡ್ರೆಸ್ಸಿಂಗ್ ರೂಂ ತೆರೆಯಲಾಗಿತ್ತು. ಕ್ರಿಯಾಶೀಲರಾಗಿ ತೊಡಗಿಸಿಕೊಂಡ ಎಲ್ಲಾ 15ಮಂದಿ ಕಲಾವಿದರು ಆಗಾಗ್ಗೆ ವೇಷಬದಲಿಸಿಕೊಂಡು ಚಲನಶೀಲ ಸ್ತಬ್ಧಚಿತ್ರಕ್ಕೆ ಜೀವ ತುಂಬಿದರು. ಅರ್ಧಗಂಟೆ ಅವಧಿಯಲ್ಲಿ ಧ್ವನಿಮುದ್ರಿತ ನಿರೂಪಣೆ ಸಹಿತ ಎಲ್ಲಾ ಹಾಡುಗಳಿಗೆ ಧ್ವನಿಯಾಗಿ, ಹೆಜ್ಜೆಹಾಕಿದ ಕಲಾವಿದರು ಶಿಲ್ಪಾಗೊಂಬೆಬಳಗದ ಹಿರಿಮೆಗೆ ಗರಿಇಟ್ಟರು. ಕಲ್ಲಡ್ಕದ ರಾಜ ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆಯಲ್ಲಿ ಅರ್ಧಗಂಟೆ ಅವಧಿಯ ಕಾರ್ಯಕ್ರಮವನ್ನು 6 ಬಾರಿ ಪ್ರದಶರ್ಿಸಿದ ಬಳಗ ನೋಡುಗರಿಂದ ಚಪ್ಪಾಳೆಯ ಅಭಿನಂದನೆ ಪಡೆದುಕೊಂಡಿತು.
ಬಳಗದ ಮಾಲಕ ರಮೇಶ್ ಕಲ್ಲಡ್ಕ ಒಂದೊಮ್ಮೆ ಗಾಯಕನಾಗಿ ಕಾಣಿಸಿಕೊಂಡರೆ, ಮತ್ತೊಮ್ಮೆ ಸಂತನಾಗಿ, ಇನ್ನೊಮ್ಮೆಏಳೂಮಲೆ ಹಾಡಿಗೆ ಹೆಜ್ಜೆ ಹಾಕುವ ಕಲಾವಿದನಾಗಿ ಕಾಣೀಸಿಕೊಂಡರು. ಇವರ ಪುತ್ರ ನಿತಿನ್ ಕಲ್ಲಡ್ಕ ಕೂಡ ಬಗೆಬಗೆಯ ಪಾತ್ರದಲ್ಲಿ ಕಾಣಿಸಿಕೊಂಡು ಒಟ್ಟು ಕಾರ್ಯಕ್ರಮದ ಚಲನಶೀಲತೆಯನ್ನು ಹೆಚ್ಚಿಸಿದರು. ಇವರಿಗೆ ಸಾಥ್ ನೀಡಿದ ಸುರೇಶ್ ಶೆಟ್ಟಿ, ರಾಜೇಶ್ ಪೂರ್ಲಪ್ಪಾಡಿ, ಸವ್ಯರಾಜ್, ಚರಣ್, ಪ್ರದೀಪ್ ಕಾವು, ಮೌನೇಶ್ ವಿಶ್ವಕರ್ಮ, ಸೋಹನ್, ಭಾಸ್ಕರ್ ಆಚಾರ್ಯ, ಗೋಪಾಲ್ ಮದ್ದ, ನವ್ಯರಾಜ್, ಸುರೇಶ್, ನವೀನ್ ರವರು ಕೂಡ ಒಟ್ಟು ಜಾತ್ರಾ ಸಂಭ್ರಮದ ಕಳೆ ಹೆಚ್ಚಿಸಿದರು. ಒಟ್ಟಿನಲ್ಲಿ ಆಕರ್ಷಣೀಯ ಸ್ತಬ್ಧಚಿತ್ರದ ಮೂಲಕ ಶಿಲ್ಪಾ ಗೊಂಬೆ ಬಳಗ ಪ್ರೇಕ್ಷಕರಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ ಎಂಬುದಂತೂ ಸತ್ಯ.
ಚಿತ್ರ;ಕಿಶೋರ್ ಪೆರಾಜೆ






