ಬಂಟ್ವಾಳ: ನಿಷ್ಕ್ರೀಯ ಮತ್ತು ನಿದ್ದೆಯಲ್ಲಿರುವ ಕರ್ನಾಟಕ ಸರ್ಕಾರವನ್ನು ಎಚ್ಚರಿಸಲು ಹಾಗೂ ಅತಂತ್ರ ಸ್ಥಿತಿಯಲ್ಲಿರುವ ರೈತರಿಗೆ ಧೈರ್ಯ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿಯವರ ನೇತೃತ್ವದಲ್ಲಿ ಹೊರಟಿರುವ ರೈತ ಚೈತನ್ಯ ಯಾತ್ರೆಯು ಸೆ.11ರಂದು ಸಂಜೆ 4 ಗಂಟೆಗೆ ಬಿ.ಸಿ.ರೋಡು ತಲುಪಲಿದೆ. ಬಳಿಕ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಮದಿರ ಪಕ್ಕದ ವಿಶಾಲ ಮೈದಾನದಲ್ಲಿ ಬೃಹತ್ ರೈತರ ಸಮಾವೇಶ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.

ರೈತ ಚೈತನ್ಯ ಯಾತ್ರೆಯ ಪ್ರಯುಕ್ತ ಗುರುವಾರ ಬಿ.ಸಿ.ರೋಡಿನಲ್ಲಿ ಪಕ್ಷದ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ನಿದ್ದೆಯಲ್ಲಿಯೇ ಇದೆ. ಅತಂತ್ರ ಸ್ಥಿತಿಯಲ್ಲಿ ಗೋಳಾಡುತ್ತಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ಬದಲು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಟೀಕಿಸಿದರು.
ಈ ಹಿಂದೆ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲಮನ್ನಾ, ಅಡಿಕೆ ಬೆಳೆಗಾರರಿಗೆ ಬೆಂಬಲ ಬೆಲೆ, ಉಚಿತ ವಿದ್ಯುತ್ ಪೂರೈಕೆ ಸೇರಿದಂತೆ ಹಲವಾರು ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ರೈತರ ಪರ ಎಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಇನ್ನೂ ನಿದ್ದೆಯಲ್ಲಿಯೇ ಇದೆ ಎಂದರು.
6 ಸಾವಿರ ಕೋಟಿ ಬಿಡುಗಡೆ:
ಬರಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರ 6000 ಕೋಟಿ ರುಪಾಯಿಯ ಪ್ಯಾಕೇಜ್ ಬಿಡುಗಡೆಗೊಳಿಸಿದ್ದು ಅದರಲ್ಲಿ ಕರ್ನಾಟಕ ರಾಜ್ಯಕ್ಕೂ 1500 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದೆ. ರಾಜ್ಯದಲ್ಲಿ ಆವರಿಸಿರುವ ಬರ ಕುರಿತಂತೆ ರಾಜ್ಯಸರ್ಕಾರ ಇದುವರೆಗೂ ಕೇಂದ್ರದ ಮುಂದೆ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ಆರೋಪಿಸಿದ ಅವರು ಮುಂದಿನ ಒಂದೆರಡು ತಿಂಗಳಲ್ಲಿ ದ.ಕ.ಕ್ಕೂ ಬರದ ಛಾಯೆ ಆವರಿಸುವ ಲಕ್ಷಣ ಗೋಚರಿಸಿದೆ. ಈ ನಿಟ್ಟಿನಲ್ಲಿ ಸರಕಾರ ಈಗಿಂದೀಗಲೇ ಎಚ್ಚೆತ್ತುಕೊಳ್ಳ ಬೇಕು ಎಂದರು.
ಎತ್ತಿನ ಹೊಳೆ ಯೋಜನೆಗೆ ವಿರೋಧ ಸ್ಪಷ್ಟ:
ಎತ್ತಿನ ಹೊಳೆ ಯೋಜನೆಗೆ ರಾಜಕೀಯ ರಹಿತ ಹೋರಾಟಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಸರಕಾರ ಈ ಯೋಜನೆಯ ಕುರಿತಂತೆ ಇಲ್ಲಿನ ಜನಪ್ರತಿನಿಧಿಗಳು, ಹೋರಾಟಗಾರರು ಹಾಗೂ ಪರಿಸರದ ಜನರನ್ನು ಕರೆದು ಚರ್ಚಿಸಬೇಕು ಎಂದು ಹೇಳಿದ ಸಂಸದ ನಳಿನ್ ಕುಮಾರ್ ಕಟೀಲು ಒದೊಂದು ಹಣ ಲೂಟಿ ಮಾಡುವ ವೋಟ್ಬ್ಯಾಂಕ್ ಯೋಜನೆ ಎಂದು ಲೇವಡಿ ಮಾಡಿದರು. ತುಂಬೆ ನೂತನ ವೆಂಟೆಡ್ ಡ್ಯಾಂನಿಂದ ಬಂಟ್ವಾಳ ತಾಲೂಕಿನ ರೈತರಿಗೆ ಆಗಿರುವ ಅನ್ಯಾಯ ಬಗ್ಗೆಯೂ ಬಿಜೆಪಿ ರೈತರ ಸಮಾವೇಶದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಜಿ.ಆನಂದ, ನಾಗಾರಾಜ ಶೆಟ್ಟಿ, ಸುಲೋಚನಾ ಭಟ್, ರುಕ್ಮಯ ಪೂಜಾರಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಗಣೇಶ್ ರಾವ್, ದೇವದಾಸ ಶೆಟ್ಟಿ, ನೇಮಿರಾಜ ರೈ, ವಿಕಾಸ್ ಪುತ್ತೂರು, ರಾಮದಾಸ ಬಂಟ್ವಾಳ ಮೊದಲಾದವರಿದ್ದರು.
