ಕಟೀಲು: ಶ್ರೀ ದುರ್ಗಾಪರಮೇಶ್ವರೀ ಮಡಿಲಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದಕ್ಷಿಣ ಕನ್ನಡ 20ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆ.28ರಂದು ಶುಕ್ರವಾರ ಉದ್ಘಾಟನೆಗೊಂಡಿತು. ಕಟೀಲಿನಲ್ಲಿ ಡಾ. ಎನ್.ಸುಕುಮಾರ ಗೌಡರ ಅಧ್ಯಕ್ಷತೆಯಲ್ಲಿ ನಡೆಯುವ 20 ನೇ ದಕ್ಷಿಣ ಕನ್ನಡ ಸಮ್ಮೇಳನವನ್ನು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .ವಿಧಾನ ಪರಿಷತ್ ಸಭಾಪತಿಗಳಾದ ಡಿ ಎಚ್ ಶಂಕರ ಮೂರ್ತಿ ಉದ್ಘಟನೆಯನ್ನು ನೆರವೇರಿಸಿದರು, ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಕಾರ್ಯಕ್ರಮದಲ್ಲಿ ಪಾರ್ದನ ಕಲಾವಿದೆ ಗಿಡಿಗೆರೆ ರಾಮಕ್ಕ, ಹಿರಿಯ ಸಾಹಿತಿ ಕೇಶವ ಉಚ್ಚಿಲ್, ವಾದ್ಯ ಸಂಗೀತಗಾರ ಲಿಂಗಪ್ಪ ಸೇರಿಗಾರ, ಬಹುಬಾಷ ವಿದ್ವಾಂಸರಾದ ಲಕ್ಷಮಣದಾಸ್ ವೇಲಣಕರ್,ಸಂಗೀತ ಕ್ಷೇತ್ರದ ಸರೋಜ ಎಂ ರಾವ್, ಆಗಮ ವಿದ್ವಾಂಸರಾದ ಶಿಬರೂರು ವೇದವ್ಯಾಸ ತಂತ್ರಿ, ಸಾಹಿತಿ ಎ.ಪಿ ಮಾಲತಿ, ಯಕ್ಷಗಾನ ಗುರು ಮಾಂಬಾಡಿ ಸುಬ್ರಮಣ್ಯ ಭಟ್, ಭರತನಾಟ್ಯ ವಿದ್ವಾಂಸರಾದ ಮುರಳಿದರ್ ರಾವ್, ಮತ್ತಿತರಿಗೆ ವಿದ್ವತ್ ಸಂಮಾನ ನಡೆಯಿತು. ಸಮ್ಮೇಳನದ ಪೂರ್ವ ಭಾವಿಯಾಗಿ ಗಿಡಿಗೆರೆ ಗಿಡಿಗೆರೆಯ ಶ್ರೀ ಮಹಾಕಾಳಿ ಬ್ರಹ್ಮಮುಗೇರ ದೈವಸ್ಥಾನದಲ್ಲಿ ನಡೆದ ಮೆರವಣಿಗೆಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಸದಸ್ಯ ಈಶ್ವರ ಕಟೀಲು ಚಾಲನೆ ನೀಡಿದರು, ಸಮ್ಮೇಳನದ ನಡೆದ ಮೆರವಣಿಗೆಯು ಕೊಂಡೆಮೂಲ ಗ್ರಾಮ ಪಂಚಾಯಿತಿಯ ಉಪಾದ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಸಿದರು.
ಎಕ್ಕಾರು ಗ್ರಾಮ ಪಂಚಾಯಿತಿಯ ಪ್ರಥಮ ಪ್ರಜೆ ಸುರೇಶ್ ಶೆಟ್ಟಿ ಎಕ್ಕಾರು ದೀಪವನ್ನು ಬೆಳಗಿಸಿ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು. ಸಮ್ಮೇಳನ ಅಧ್ಯಕ್ಷರಾದ ಡಾ. ಎನ್. ಸುಕುಮಾರ ಗೌಡ, ಸಚಿವ ಕೆ. ಅಭಯಚಂದ್ರ ಜೈನ್, ಕಾರ್ಯಾಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಜಿಲ್ಲಾಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರರನ್ನು ಹೊತ್ತ ಹೂವಿನಲಂಕಾರದ ವಾಹನ, ಕಟೀಲು ಸಮೂಹ ವಿದ್ಯಾ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ಸಾಗಿತು, ಮೆರವಣಿಗೆ ಉದ್ದಕ್ಕೂ ಬೇತಾಳಗಳು, ಅಂಬಾರಿಯಲ್ಲಿ ಒಡೆಯರ್ ಹೊತ್ತ ಟ್ಯಾಬ್ಲೋ, ಭಾರತ ಸೇವಾ ದಳ. ಹುಲಿ ವೇಷ, ಸ್ಕೌಟ್ಸ್ ಮತ್ತು ಗೈಡ್ಸ್, ತಾಲೀಮು, ಚಂಡೆಯ ನಿನಾದ, ಸ್ಯಾಕ್ಸೋಫೋನ್ ವಾದನ, ಇದ್ದು ಮೆರವಣಿಗೆಯ ಅಂದವನ್ನು ಹೆಚ್ಚಿಸಿತು ಭಗವದ್ಗೀತೆ ಮತ್ತು ತಾಳೇಗರಿಯ ಗ್ರಂಥ ಭಂಡಾರವನ್ನು ಹೊತ್ತ ರಥ, ಜ್ಞಾನಪೀಠ ಪುರಸ್ಕೃತ ಮತ್ತು ಸಮ್ಮೇಳನಾಧ್ಯಕ್ಷರ ಕೃತಿಗಳ ನ್ನು ಹೊತ್ತ ಪಲ್ಲಕ್ಕಿ ಗ್ರಂಥದ ಗೌರವವನ್ನು ಹೆಚ್ಚಿಸಿತು, ಪೂರ್ಣಕುಂಭ ಕಲಶ ಹೊತ್ತ ಮಹಿಳೆಯರು ಮರವಣಿಗೆಯ ಶೋಭೆಯನ್ನು ಹೆಚ್ಚಿಸಿದರು.
ಗಿಡಿಗೆರೆ ದೈವಸ್ಥಾನದಲ್ಲಿ ಆರಂಭಗೊಂಡ ಮೆರವಣಿಗೆ, ಪದವಿ ಕಾಲೇಜು ರಸ್ತೆ, ಅಜಾರು ರಸ್ತೆ, ಮುಖ್ಯ ಬಸ್ ನಿಲ್ದಾಣ, ದೇವಸ್ಥಾನದ ರಥಬೀದಿಯಾಗಿ ಕಟೀಲು ಪದವಿಪೂರ್ವ ಕಾಲೇಜು ಆವರಣದಲ್ಲಿ ಸಮಾಪನಗೊಂಡಿತು.
ರಾಷ್ಟ್ರಧ್ವಜವನ್ನು ಕೊಂಡೆಮೂಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗೀತಾ ಪೂಜಾರ್ತಿ, ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ, ಸಮ್ಮೇಳನದ ಧ್ವಜಾರೋಹಣವನ್ನು ಮಂಗಳೂರು ತಾಲ್ಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್ರವರು ನೆರವೇರಿಸಿದರು.
ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಸಮಿತಿಯ ಭುವನಾಭಿರಾಮ ಉಡುಪ, ಜಯರಾಂ ಪೂಂಜಾ, ಸಾಯಿನಾಥ ಶೆಟ್ಟಿ, ದಯಾನಂದ ಕಟೀಲು, ಭಾರತ ಸೇವಾದಲದ ಜಿಲ್ಲಾ ಸಂಘಟಕ ಟಿ.ಎಸ್. ಮಂಜೇಗೌಡ ಇನ್ನಿತರರು ಹಾಜರಿದ್ದರು.
ಕಟೀಲು ಕಾಲೆಜಿನ ಸಭಾಂಗಣದಲ್ಲಿ ಪುಸ್ತಕ ಮಳಿಗೆಗಳಿದ್ದು ಮಳಿಗೆಗಳಲ್ಲಿ ಅಷ್ಟೇನು ಜನ ಕಂಡು ಬರದಿದ್ದರೂ ಮುಂದಿನ ಎರಡು ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂಬುದು ಪುಸ್ತಕ ಮಳಿಗೆಯವರ ಅಭಿಮತವಾಗಿದೆ ಪುಸ್ತಕ ಮಳಿಗೆಯ ಜೊತೆಯೇ ಫ್ಯಾನ್ಸಿ, ಆಯುರ್ವೇ ದ ಔಷಧಿ, ಅಡುಗೆ ಮನೆಯ ಉಪಯುಕ್ತ ಸಾಧನಗಳು, ದಿ. ಪು. ಶ್ರೀನಿವಾಸ ಭಟ್ರವರ ಸಂಗ್ರಹದ ಯಕ್ಷಗಾನ ಪುಸ್ತಕ ಪ್ರಪಂಚ, ಚಿತ್ರಕಲಾ ಪ್ರದರ್ಶನ, ಯಕ್ಷಗಾನ ಕಂಬಳ ಚಿತ್ರಗಳ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ, ಪತ್ರಿಕಾ ಸಂಗ್ರಾಹಕ ಉಮೇಶ್ ರಾವ್ ಎಕ್ಕಾರುರವರ ಸಂಗ್ರಹದ ಪುಸ್ತಕ, ಪತ್ರಿಕೆಗಳು ಮುಂತಾದವುಗಳು ಆಕರ್ಷಣೆಯನ್ನು ಕಂಡಿತ್ತು.
ಸಮ್ಮೇಳನ ಮೂರು ವೇದಿಕೆಯಲ್ಲಿ ನಡೇಯುತ್ತಿದ್ದು ರಥಬೀದಿಯಲ್ಲಿರುವ ಸರಸ್ವತೀ ಸದನದಲ್ಲಿ ಮುಖ್ಯ ವೇದಿಕೆಯಿದ್ದರೆ, ಸಮಾನಾಂತರವಾಗಿ ಪದವೀಪೂರ್ವ ಕಾಲೇಜು ಸಭಾಂಗಣದಲ್ಲಿ ಯಕ್ಷೋಪಾಸನಾ ಶಿಬಿರ ನಡೆಯುತ್ತಿದೆ. ನಂದಿನಿ ಹೊಳೆಯ ಮಧ್ಯದಲ್ಲಿರುವ ದೇಗುಲದ ಆವರಣದಲ್ಲಿ ಮೂರು ದಿನಗಳ ಕಾಲವೂ ಬೆಳಿಗ್ಗೆ 6.30ರಿಂದ ರಾತ್ರಿ 9ರವರೆಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುವುದು ಈ ಬಾರಿಯ ವಿಶೇಷವಾಗಿದೆ.
ಕಟೀಲು ಇತಿಹಾಸ ಮತ್ತು ಸಂಸ್ಕೃತಿ, ಕರಾವಳಿಯ ಮಾಧ್ಯಮಗಳು, ಕರಾವಳಿ ಜೀವನದಲ್ಲಿ ಹಾಸ್ಯ ಸ್ವಾರಸ್ಯ, ಕರಾವಳಿಯ ಮಹಾಕಾವ್ಯಗಳು, ಕರಾವಳಿ ಕಲಾಕ್ಷೇತ್ರ ಹೊಸ ಬೆಳವಣಿಗೆಗಳು, ತುಳುನಾಡಿನ ವಾಸ್ತು- ಸ್ವರೂಪ ಮತ್ತು ವಿನ್ಯಾಸ, ಕರಾವಳಿ ಕರ್ನಾಟಕ ಇತ್ತೀಚಿನ ಬೆಳವಣಿಗೆಗಳು, ಕರಾವಳಿ ಕರ್ನಾಟಕದ ವರ್ತಮಾನದ ನೋಟ ಗೋಷ್ಟಿಗಳು ನಡೆದರೆ, ಸಮಾನಾಂತರ ವೇದಿಕೆ ಯಕ್ಷಗಾನ ಕಲಾ ಮಂಟಪದಲ್ಲಿ ತಾಳಮದ್ದಲೆ ಮತ್ತು ಯಕ್ಷಗಾನದಲ್ಲಿ ಪೀಠಿಕೆ ವಿನ್ಯಾಸ, ಪ್ರಬೇಧ, ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ಭಾಷೆ, ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ವೈಚಾರಿಕತೆ ಮತ್ತು ವರ್ತಮಾನ, ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ಪಾತ್ರ-ಆಕರ-ಆಕಾರ, ಆಟ ಕೂಟಗಳಲ್ಲಿ ಪ್ರಸಂಗ, ಭಾವೋತ್ಪತ್ತಿ, ರಸಪ್ರತಿಪಾದನೆ ಬಗ್ಗೆ ಗೋಷ್ಟಿಗಳು ನಡೆಯಲಿವೆ. ಇವಲ್ಲದೆ ಕನ್ನಡ ಹೊರನಾಡ ಸ್ಪಂದನ ಕವಿಗೋಷ್ಟಿ, ವಿದ್ಯಾರ್ಥಿ ಕಥಾ ಗೋಷ್ಟಿ, ಶತಸಂಭ್ರಮ ಕವಿ ಗೋಷ್ಟಿ, ಜೊತೆಗೆ ಕಯ್ಯಾರ ಸಂಸ್ಮರಣೆ, ಮೂರು ವಿಶೇಷ ಉಪನ್ಯಾಸಗಳು, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮವಿದ್ದು, ಮೂರು ದಿನಗಳಲ್ಲಿ ಲಕ್ಷ, ಲಕ್ಷ ಜನ ಬೇಟಿ ನೀಡುವ ನಿರೀಕ್ಷೆ ಇದೆ





