ಬಂಟ್ವಾಳ : ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣಕ್ಕೆ ಸ್ಥಳೀಯ ಪುರಸಭಾ ಸದಸ್ಯರನ್ನು ಕರೆದು ಬಳಿಕ ಶಿಷ್ಟಾಚಾರ ಮೀರಿದ ಶಾಲಾ ಮುಖ್ಯೋಪಾಧ್ಯಾಯರು ಬೇರೆಲ್ಲಿಂದಲೋ ಬಂದ ಪಂಚಾಯತ್ ಸದಸ್ಯರೋರ್ವರಿಗೆ ಧ್ವಜಾರೋಹಣದ ಅವಕಾಶ ನೀಡಿ ಜನಪ್ರತಿನಿಧಿಗೆ ಸಾರ್ವಜನಿಕವಾಗಿ ಅವಮಾನಿಸಿದ ಘಟನೆ ಪಾಣೆಮಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ.
ಪಾಣೆಮಂಗಳೂರು ಶತಮಾನೋತ್ಸವದ ಹೊಸ್ತಿಲಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಲ್ಲಿನ ಸ್ಥಳೀಯ ಪುರಸಭಾ ಸದಸ್ಯರು ಧ್ವಜಾರೋಹಣ ನೆರವೇರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಅದರಂತೆ ಈ ಬಾರಿಯೂ ಸ್ಥಳೀಯ ಕೌನ್ಸಿಲರ್ ಚಂಚಲಾಕ್ಷಿ ಅವರನ್ನು ಧ್ವಜಾರೋಹಣಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಅವರು ಅಧಿಕೃತವಾಗಿ ಆಹ್ವಾನಿಸಿದ್ದರು. ಮುಖ್ಯ ಶಿಕ್ಷಕಿಯ ಆಹ್ವಾನದ ಮೇರೆಗೆ ಶಾಲೆಗೆ ತೆರಳಿದ ಕೌನ್ಸಿಲರ್ ಚಂಚಲಾಕ್ಷಿ ಅವರನ್ನು ನಿರ್ಲಕ್ಷಿಸಿ ನರಿಕೊಂಬು ಗ್ರಾ ಪಂ ಸದಸ್ಯ ದಯಾನಂದ ಎಂಬವರಿಗೆ ಏಕಾಏಕಿ ಧ್ವಜಾರೋಹಣಗೈಯುವ ಅವಕಾಶ ನೀಡುವ ಮೂಲಕ ನನ್ನನ್ನು ರಾಷ್ಟ್ರೀಯ ಹಬ್ಬ ಆಚರಣೆಯ ಸಂದರ್ಭ ಸಾರ್ವಜನಿಕವಾಗಿ ಶಾಲಾ ಮುಖ್ಯ ಶಿಕ್ಷಕಿ ಅವಮಾನಿಸಿದ್ದಾರೆ ಎಂದು ಪುರಸಭಾ ಸದಸ್ಯೆ ಚಂಚಲಾಕ್ಷಿ ಆರೋಪಿಸಿದ್ದಾರೆ.
ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಎಸ್‍ಡಿಎಂಸಿ ಅಧ್ಯಕ್ಷರಲ್ಲಿ ಸ್ಪಷ್ಟನೆ ಕೇಳಿದ್ದು, ಈ ಸಂದರ್ಭ ದಯಾನಂದ್ ಅವರು ನಮಗೆ ಬೇಕಾದವರು ಅದಕ್ಕಾಗಿ ಅವರಲ್ಲಿ ಧ್ವಜ ಅರಳಿಸಿದ್ದೇವೆ ಎಂದು ಉಡಾಫೆ ಹಾಗೂ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚಂಚಲಾಕ್ಷಿ ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಚಿವರೂ ಆಗಿರುವ ಬಿ ರಮಾನಾಥ ರೈ ಹಾಗೂ ಪುರಸಭಾಧ್ಯಕ್ಷರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಎಸ್‍ಡಿಎಂಸಿ ಅಧ್ಯಕ್ಷರು ಚುನಾಯಿತ ಜನಪ್ರತಿನಿಧಿಗೆ ಅವಮಾನಿಸಿರುವ ಬಗ್ಗೆ ಸ್ಪಷ್ಟನೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೂ ದೂರು ನೀಡಲಾಗುವುದು ಎಂದು ಚಂಚಲಾಕ್ಷಿ ಪತ್ರಿಕೆಗೆ ತಿಳಿಸಿದ್ದಾರೆ.
