ಬಂಟ್ವಾಳ: ಕಾಲ ಬದಲಾದಂತೆ ಬದುಕು ಬದಲಾಗ್ತುತಿರುತ್ತದೆ. ಅದಕ್ಕನುಗುಣವಾಗಿ ನಮ್ಮ ಭಾಷೆಯ ಬಳಕೆಯಲ್ಲೂ ಹೊಸ ಹೊಸ ಬದಲಾವಣೆಗಳಾಗಬೇಕು. ಆಧುನಿಕ ತಂತ್ರಜ್ಞಾನವನ್ನು ಭಾಷೆಯಲ್ಲಿ ಅಳವಡಿಸುವ ಮೂಲಕ ಹೆಚ್ಚ್ಚಿನ ಜ್ಞಾನ ಸಂಗ್ರಹ ಮಾಡಲು ಸಾಧ್ಯ. ಕನ್ನಡ ಭಾಷೆಯೊಂದು ತಮ್ಮ ಪಾರಂಪರಿಕ ಶೈಲಿ ಬಿಟ್ಟು ಆಧುನಿಕ ಶೈಲಿಗೆ ತನ್ನನ್ನು ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯ ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಹೇಳಿದರು.

ಅವರು ಬಂಟ್ವಾಳದ ಎಸ್.ವಿ.ಎಸ್ ಕಾಲೇಜು ಕನ್ನಡ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಉಪನ್ಯಾಸಕರ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಕನ್ನಡದ ಕಲಿಕೆ-ಬಳಕೆ: ಸಾಧ್ಯತೆಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಕೃಷ್ಣಮೂರ್ತಿ ಮಾತನಾಡಿ ಆಧುನಿಕ ತಂತ್ರಜ್ಞಾನವು ಕನ್ನಡ ಭಾಷೆಗೆ ಸವಾಲಾಗಬಾರದು. ತಂತ್ರಜ್ಞಾನವನ್ನು ಸಕಾರಾತ್ಮವಾಗಿ ಸ್ವೀಕರಿಸಿ ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದರು.
ವಿಚಾರ ಸಂಕಿರಣದ ಸಂಯೋಜಕಿ ಮತ್ತು ಕನ್ನಡ ವಿಭಾಗ ಮುಖ್ಯಸ್ಥರಾದ ಡಾ| ನಾಗವೇಣಿ ಮಂಚಿ ವೇದಿಕೆಯಲ್ಲಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಪ್ರಕಾಶ್ಚಂದ್ರ ಶಿಶಿಲ ವಂದಿಸಿದರು.
ಉಪನ್ಯಾಸಕಿ ಶ್ರೀಮತಿ ಅಪರ್ಣ ರಾವ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕಿಟ್ಟು ರಾಮಕುಂಜ, ಚೇತನ್ ಮುಂಡಾಜೆ ಸಹಕರಿಸಿದರು. ರಾಜ್ಯದ ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ನೂರ ಹತ್ತಕ್ಕೂ ಹೆಚ್ಚು ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿದ್ದರು
