ಬಂಟ್ವಾಳ:ಈ ದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರು ಕೂಡಾ ಯಾವುದೇ ಜಾತಿ, ಮತ, ರಾಜಕೀಯ ಬೇಧವಿಲ್ಲದೆ ದೇಶದ ರಕ್ಷಣೆಗಾಗಿ ಸ್ವಯಂ ಸೇನಾನಿಗಳಂತೆ ಕರ್ತವ್ಯ ನಿರ್ವಹಿಸಬೇಕು. ಈ ಬಗ್ಗೆ ಮಕ್ಕಳಿಗೆ ಬಾಲ್ಯದಿಂದಲೇ ದೇಶಭಕ್ತಿ ಜೊತೆಗೆ ಶುಚಿತ್ವ ಮತ್ತು ಪರಿಸರ ಸಂರಕ್ಷಣೆ ಮೂಲಕ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ಮಕ್ಕಳ ಪೋಷಕರ ಮೇಲಿದೆ ಎಂದು ನಿವೃತ್ತ ಸೈನಿಕ ಮೋಹನ ಮೂಲ್ಯ ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ವತಿಯಿಂದ ಕೈತ್ರೋಡಿ ಮೈದಾನದಲ್ಲಿ ಭಾನುವಾರ ನಡೆದ ‘ಕಾರ್ಗಿಲ್ ವಿಜಯ’ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸ್ಥಳೀಯ ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಮಾತನಾಡಿ, ಇಲ್ಲಿನ ಭಜನಾ ಮಂಡಳಿ ವತಿಯಿಂದ ಹಲವು ಸಮಾಜಮುಖಿ ಚಟುವಟಿಕೆ ಜೊತೆಗೆ ಸ್ವಚ್ಛತೆ ಮತ್ತು ದೇಶಭಕ್ತಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ಉದ್ಯಮಿ ಎಂ.ದುರ್ಗಾದಾಸ್ ಶೆಟ್ಟಿ, ಸಂತೋಷ್ ಕುಮಾರ್ ಬೆಟ್ಟು, ಸಂತೋಷ್ ಕುಮಾರ್ ಚೌಟ ಮತ್ತಿತರರು ಶುಭ ಹಾರೈಸಿದರು.
ಭಜನಾ ಮಂಡಳಿ ಸಂಸ್ಥಾಪಕ ರವೀಂದ್ರ ಪೂಜಾರಿ, ಮಹಿಳಾ ಮಂಡಳಿ ಅಧ್ಯಕ್ಷೆ ಯಮುನಾ ಪೂಜಾರಿ, ಪ್ರಮುಖರಾದ ಆಶಾ ಕೈತ್ರೋಡಿ, ಪ್ರಮುಖರಾದ ಗಂಗಾಧರ ಪಿಲ್ಕಾಜೆ, ಹರೀಶ ಶೆಟ್ಟಿ, ಸುರೇಶ ಆಚಾರ್ಯ, ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಕೈತ್ರೋಡಿ-ರಾಯಿ ರಸ್ತೆಯಲ್ಲಿ ಭಜನಾ ಮಂಡಳಿ ಸದಸ್ಯರಿಂದ ನಡೆದ ‘ಸ್ವಚ್ಛತಾ ಆಂದೋಲನ’ ಜಾಥಾ ಕಾರ್ಯಕ್ರಮದಲ್ಲಿ ಸ್ಥಳೀಯ ನೂರಾರು ಮಂದಿ ಪಾಲ್ಗೊಂಡರು.
ದಿನೇಶ ಕುದ್ಕೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
