ಬಂಟ್ವಾಳ: ತಾಲೂಕಿನ ಮೆಸ್ಕಾಂ, ಬಿಎಸ್ಎನ್ಎಲ್, ತಾಲೂಕು ಪಂಚಾಯತ್ ಹಾಗೂ ಬಂಟ್ವಾಳ ಪುರಸಭೆಗೆ ಪಾವತಿಯಾಗದೆ ಬಾಕಿ ಉಳಿದಿದ್ದ ತೆರಿಗೆ ಹಾಗೂ ಬಿಲ್   ಲಕ್ಷಾಂತರ ರೂ ಮೊತ್ತದ ಪೈಕಿ ಸುಮಾರು 15 ಲಕ್ಷ ಮೊತ್ತವನ್ನು ಶನಿವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಬಂಟ್ವಾಳ ಪುರಸಭೆಯು ಜಂಟಿಯಾಗಿ ನಡೆಸಿದ ಲೋಕ ಅದಾಲತ್ ನಲ್ಲಿ ಸಂಗ್ರಹಿಸಲಾಗಿದೆ.

BTW_JULY11_2

5
ಪ್ರಧಾನ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಯು.ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಲೋಕಅದಾಲತ್ ನಲ್ಲಿ ನ್ಯಾಯಾಧೀಶರಾದ, ಸಮಿತಿ ಕಾರ್ಯದರ್ಶಿ  ದೇವಾನಂದ್ ಹಾಗೂ ನ್ಯಾಯಾಧೀಶರಾದ ಆರ್.ಮಹೇಶ್ ಭಾಗವಹಿಸಿದ್ದರು. ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶರು ಹಾಗೂ ಸಮಿತಿ ಅಧ್ಯಕ್ಷರಾದ ಯುಚಂದ್ರಶೇಖರ್ ಅವರು, ಕಳೆದ 2001 ರಿಂದ ತಾಲೂಕಿನಲ್ಲಿ ಸುಮಾರು 7000 ತೆರಿಗೆ , ಕರ ವಂಚನೆ ಪ್ರಕರಣಗಳು ದಾಖಲಾಗಿದೆ. ಇವುಗಳಿಗೆ ನೊಟೀಸ್ ಜಾರಿ ಮಾಡಲಾಗಿದ್ದು, ಈವರೆಗೆ 1250 ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಲೋಕ ಅದಾಲತ್ ನಡೆಸಲಾಗುತ್ತಿದೆ, ವಿವಿಧ ಕಾರಣಗಳಿಂದ ತೆರಿಗೆ ಪಾವತಿಸಲು ಬಾಕಿ ಉಳಿದವರಿಗೆ ಅದಾಲತ್ ನಡೆಸುವ ಮೂಲಕ ಅವಕಾಶ ಒದಗಿಸಲಾಗುತ್ತಿದ್ದು, ಇದಕ್ಕೆ ಸುಪ್ರೀಂ ಕೋರ್ಟ್  ನಿರ್ದೇಶನವಿದೆ ಎಂದರು.

ಸಮಿತಿ ಕಾರ್ಯದರ್ಶಿ  ನ್ಯಾಯಮೂರ್ತಿ  ದೇವಾನಂದ ಮಾತನಾಡಿ, ಮುಂದಿನ ತಿಂಗಳ ಎರಡನೇ ಶನಿವಾರ, ಬ್ಯಾಂಕ್ ಗಳ ಕುರಿತಾದ ವ್ಯಾಜ್ಯ, ಚೆಕ್ ಬೌನ್ಸ್ ಪ್ರಕರಣಗಳ ಇತ್ಯರ್ಥಕ್ಕೆ ಲೋಕ ಅದಾಲತ್ ನಡೆಸಲಾಗುವುದು. ಇದು ಪ್ರತೀ ತಿಂಗಳು ಮುಂದುವರಿಯಲಿದೆ ಎಂದರು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳ ಬೇಕು. ತೆರಿಗೆ ಹಣದಿಂದಲೇ ಸ್ತಳೀಯ ಸಂಸ್ಥೆಗಳಿಗೆ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಗುವುದು. ಇದನ್ನು ಮನಗಂಡು ಬಾಕಿ ಉಳಿಸಿಕೊಂಡ ಎಲ್ಲರೂ ತೆರಿಗೆ ಹಾಗೂ ಬಿಲ್ ಪಾವತಿಸಬೇಕು ಎಂದರು.

ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮೊದಲಾದವರು ಉಪಸ್ಥಿತರಿದ್ದರು. ಪುರಸಭೆಯ ಅಧಿಕಾರಿಗಳು ನ್ಯಾಯಲಯದಲ್ಲಿ ಹಾಜರಿದ್ದು ಬಾಕಿ ಉಳಿದಿರುವ ತೆರಿಗೆಯನ್ನು ವಸೂಲು ಮಾಡಿದರು.
ಮುಖ್ಯಾಧಿಕಾರಿಯ ದಿಟ್ಟ ನಿರ್ಧಾರ:

ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ   ಯವರಿಂದ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಹಲವು ಸಮಯಗಳಿಂದ ಕಟ್ಟಡ ಹಾಗೂ ನೀರಿನ ಕರ ಪಾವತಿಸಲು ಬಾಕಿಯಾಗಿದ್ದ ಒಟ್ಟು ಮೂರು ಸಾವಿರ ಮಂದಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ನೊಟೀಸ್ ಜಾರಿ ಗೊಳಿಸಿದ ಬಳಿಕದ ಐದು ದಿನಗಳಲ್ಲಿ ಪುರಸಭೆಯ ಬೊಕ್ಕಸಕ್ಕೆ ಸುಮಾರು 10 ಲಕ್ಷ ರುಪಾಯಿ ಆದಾಯ ಹರಿದು ಬಂದಿದೆ.

ಕಳೆದ ಹಲವು ವರ್ಷಗಳಿಂದ ಪುರಸಭೆಗೆ ತೆರಿಗೆ ಪಾವತಿಸದೇ ವಂಚಿಸುತ್ತಿದ್ದವರಿಂದ ತೆರಿಗೆ ವಸೂಲು ಮಾಡಲು ಕಾನೂನು ಸೇವೆಗಳ ಸಮಿತಿ ನೋಟೀಸ್ ಜಾರಿ ಮಾಡಿತ್ತು. ಈ ಸಂಬಂಧ ಕೆಲವರು ಪುರಸಭಾ ಕಾರ್ಯಲಯಕ್ಕೆ ಬಂದು ಬಾಕಿ ಪಾವತಿಸಿದ್ದರೆ ಇನ್ನೂ ಕೆಲವರು ಮುಖ್ಯಾಧಿಕಾರಿಯ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿ ಉಡಾಫೆಯ ಮಾತುಗಳನ್ನಡಿದ್ದರು. ಕೆಲ ಹಾಲಿ ಹಾಗೂ ಮಾಜಿ ಪುರಸಭಾ ಸದಸ್ಯರೇ ತೆರಿಗೆ ವಂಚಕರಿಗೆ ಬೆಂಬಲವಾಗಿ ನಿಂತು, ಬಾಕಿ ತೆರಿಗೆ ವಸೂಲು ಮಾಡುವ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು.

ಆದರೆ ಹೆಚ್ಚಿನ ಸದಸ್ಯರು ಸಹಿತ ಜಿಲ್ಲಾ ಉಸ್ತುವಾರಿ ಸಚಿವರು ತೆರಿಗೆ ಬಾಕಿ ಸಂಗ್ರಹಣೆಯ ಬಗ್ಗೆ ಮುಖ್ಯಾಧಿಕಾರಿ ಲೀನಾ ಬ್ರಿಟೋ ಅವರ ದಿಟ್ಟ ನಡೆಗೆ ಸಮ್ಮತಿ ಸೂಚಿಸಿದ್ದರು. ಅದರಂತೆ ಇದೀಗ ಪಾವತಿಯಾಗದೇ ಬಾಕಿಯಾಗಿ ಉಳಿದಿರುವ ಲಕ್ಷಂತರ ರುಪಾಯಿ ತೆರಿಗೆಯಲ್ಲಿ ರು. 10 ಲಕ್ಷವನ್ನು ಲೋಕಾ ಅದಾಲತ್ ಮೂಲಕ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಷ್ಟು ತೆರಿಗೆ ಹಣ ಪಾವತಿಗೆ ಬಾಕಿ ಉಳಿದಿದ್ದು ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ವಸೂಲು ಮಾಡಲು ನಿರ್ಧರಿಸಲಾಗಿದೆ. ತೆರಿಗೆ ವಂಚಕರು ಹಾಗೂ ಕೆಲ ಸದಸ್ಯರ ವಿರೋಧದ ನಡುವೆಯೂ ತೆರಿಗೆ ವಸೂಲು ಮಾಡುವಲ್ಲಿ ದಿಟ್ಟ ನಡೆ ಪ್ರದರ್ಶಿಸಿದ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

 

By Suddi9

Leave a Reply

Your email address will not be published. Required fields are marked *