ಬಂಟ್ವಾಳ: ಕೆಲವು ದಿನಗಳಿಂದ ಆಧಾರ್ ಕಾರ್ಡ್ ನೋಂದಣಿಗಾಗಿ ವಿದ್ಯಾರ್ಥಿ ಪೋಷಕರು, ವಿದ್ಯಾರ್ಥಿಗಳು ತಾಲೂಕು ಕೇಂದ್ರದಲ್ಲಿ ನಡೆಸುತ್ತಿರುವ ಪರದಾಟ ಇನ್ನೂ ಮುಂದುವರಿದಿದೆ. ಆಧಾರ್ ಕಾರ್ಡ್ ನ ಗೊಂದಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಗಳು ಹಾಗೂ ಪೋಷಕರು ಬಿ.ಸಿ.ರೋಡಿನ ಎಪಿಎಂಸಿ ಕಛೇರಿಯಲ್ಲಿ ನೋಂದಾವಣೆ ಮಾಡುತ್ತಿರುವ ಆಧಾರ್ ಕೇಂದ್ರದ ಮುಂದೆ ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.

ಆಧಾರ್ ಕಾರ್ಡ್ ನೋಂದಾವಣೆಗಾಗಿ ವಿದ್ಯಾರ್ಥಿಗಳು ಮುಂಜಾನೆಯಿಂದಲೇ ಕೇಂದ್ರದ ಮುಂದೆ ಕ್ಯೂ ನಿಲ್ಲುತ್ತಿದ್ದರೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಆಧಾರ್ ತಾಲೂಕು ಕೇಂದ್ರಇಲಾಖೆಗಳಿಂದ ಸಮರ್ಪಕ ಮಾಹಿತಿ ಸಿಗುತ್ತಿಲ್ಲ, ಮಾಹಿತಿ ಕೊರತೆಯಿಂದಾಗಿ ಆಧಾರ್-ಆದಾಯ ಪ್ರಮಾಣ ಪತ್ರ ಅಗತ್ಯವಾಗಿ ಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕರು ತಾಲೂಕು ಕಛೇರಿಯಲ್ಲಿ ಮುಗಿ ಬೀಳುತ್ತಿದ್ದು ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ.
ಈ ಬಗ್ಗೆ ಎರಡು ದಿನಗಳ ಹಿಂದೆ ಸುದೀರ್ಘ ಚರ್ಚೆ ನಡೆಯಿತಾದರೂ ಯಾವುದೇ ಸ್ಪಷ್ಟ ನಿರ್ಧಾರವಾಗಿರಲಿಲ್ಲ. ಹೀಗಾಗಿ ಆಧಾರ್ ಕಾರ್ಡ್ನ ಕುರಿತ ಗೊಂದಲ ವಿದ್ಯಾರ್ಥಿ ಗಳಲ್ಲಿ ಇನ್ನೂ ಮುಂದುವರಿದಿದೆ. ಅಧಿಕಾರಿಗಳೂ ಕೂಡ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಶಾಲಾ ಕಾಲೇಜಿಗೆ ನೀಡದೇ ಇರುವುದರಿಂದ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕುವಂತಾಗಿದೆ. ಶನಿವಾರವೂ ಎಪಿಎಂಸಿ ಕಚೇರಿ ಮುಂದೆ ಆಧಾರ್ ನೊಂದಣಿಗಾಗಿ ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಿ ಪೋಷಕರೊಂದಿಗೆ ಆಗಮಿಸಿದ್ದು, ಗೊಂದಲ ಹೆಚ್ಚಾಗಿತ್ತು.
ಇದೇ ವೇಳೆ ಇಲ್ಲಿಗೆ ಆಗಮಿಸಿದ್ದ ಮಾಜಿ ಜಿ.ಪಂ.ಉಪಾಧ್ಯಕ್ಷ ತುಂಗಪ್ಪ ಬಂಗೇರ ಅವರು, ವಿದ್ಯಾರ್ಥಿಗಳಿಗಾಗುವ ತೊಂದರೆಗಳ ಬಗ್ಗೆ ತಹಶೀಲ್ದಾರರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರರು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗಿದೆ, ಟೋಕನ್ ವ್ಯವಸ್ಥೆ ಮಾಡಲಾಗಿದೆ ಎಂದರು. ಇದಕ್ಕೆ ಸಮಾಧಾನಗೊಳ್ಳದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಬಟನೆ ಮುಂದುವರಿಸಿದರು.
ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತ ಡಾ,ಅಶೋಕ್ ಅವರಿಗೆ ಸಮಸ್ಯೆ ಬಗೆಹರಿಕೆಗೆ ಮನವಿ ಮಾಡಲಾಯಿತು. ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಮಾತು ಕತೆ ನಡೆಸಿ ಪ್ರತೀ ಶಾಲೆಯಲ್ಲಿ ಮಕ್ಕಳಿಗೆ ಆಧಾರ್ ನೋಂದಣಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಧಿಕಾರಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದರು. ಪ್ರತಿಭಟನೆ ಅಲ್ಲಿಗೆ ಸ್ಥಗಿತಗೊಂಡಿತಾದರೂ, ಆಧಾರ್ ಗೊಂದಲ ಮತ್ತೆಯೂ ಮುಂದುವರಿದಿತ್ತು.
