ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿನ ಕೈತ್ರೋಡಿ ರಸ್ತೆ ಬದಿ ಈಚೆಗೆ ಮಳೆಯ ನಡುವೆಯೇ ಜೆಸಿಬಿ ಮೂಲಕ ಚರಂಡಿ ಹೂಳೆತ್ತಿದ ಪರಿಣಾಮ ರಸ್ತೆ ಬದಿ ಅಳವಡಿಸಿದ್ದ ಪೈಪ್ ತುಂಡಾಗಿ ಕುಡಿಯುವ ನೀರು ಪೂರೈಕೆ ಕಳೆದ ಐದು ದಿನಗಳಿಂದ ಸ್ಥಗಿತಗೊಂಡ ಘಟನೆ ನಡೆದಿದೆ. ಈ ಹಿಂದೆ ರಾಯಿ ಮತ್ತು ಕೊಯಿಲ ಗ್ರಾಮದ ಜೊತೆಗೆ ಅರಳ ಗ್ರಾಮವನ್ನೂ ಹೊಂದಿದ್ದ ಪಂಚಾಯಿತಿನಿಂದ ಅರಳ ಗ್ರಾಮ ಪ್ರತ್ಯೇಕಗೊಂಡು ಹೊಸ ಪಂಚಾಯಿತಿಯಾಗಿ ರೂಪುಗೊಂಡಿದೆ.

ಇಲ್ಲಿನ ಕೊಯಿಲ ಗ್ರಾಮದ ಕೈತ್ರೋಡಿ ಕುಡಿಯುವ ನೀರಿನ ಸಮಸ್ಯೆಗೆ ಪರ್ಯಾಯವಾಗಿ ಸ್ಥಳೀಯ ಬಾರ್ಜಾರ್ ಎಂಬಲ್ಲಿಂದ ಪೈಪ್ ಅಳವಡಿಸಿ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಎಚ್ಚರಗೊಂಡ ಪಂಚಾಯಿತಿ ಅಧಿಕಾರಿಗಳು ತರಾತುರಿಯಲ್ಲಿ ಜೆಸಿಬಿ ಮೂಲಕ ಕಾಮಗಾರಿ ನಡೆಸಿ ಇಲ್ಲಿನ ಪೈಪುಗಳನ್ನು ತುಂಡರಿಸಿದ್ದಾರೆ. ಕೈತ್ರೋಡಿ ಪರಿಸರದ ಬಹುತೇಕ ಮನೆಗಳಿಗೆ ಈ ಬಾರಿ ಇಲ್ಲಿನ ಕಂಬಳದಡ್ಡ ಎಂಬಲ್ಲಿ ಕೊರೆದ ಹೊಸ ಕೊಳವೆ ಬಾವಿಯಿಂದ ನೀರು ಪೂರೈಕೆಯಾಗುತ್ತಿದ್ದು, ಇದೀಗ ಪೈಪ್ ತುಂಡಾದ ಪರಿಣಾಮ ಇಲ್ಲಿನ ಕೈತ್ರೋಡಿ ಪರಿಸರದ ಹಲವು ಮನೆಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಇನ್ನೊಂದೆಡೆ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಂಸದರ ನಿಧಿಯಿಂದ ರೂ.3ಲಕ್ಷ ವೆಚ್ಚದಲ್ಲಿ ಕೈಗೊಂಡ ಕೈತ್ರೋಡಿ ರಸ್ತೆ ತೇಪೆ ಡಾಂಬರೀಕರಣವೂ ಎದ್ದು ಹೋಗಿ ಸಂಪೂರ್ಣ ಹೊಂಡಮಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
