ಪಂಚಾಯತ್ ರಾಜ್ ಮಸೂದೆ ತಿದ್ದುಪಡಿಯಿಂದ ಜನ ಸಾಮಾನ್ಯರಿಗೂ ಅಧಿಕಾರ: ಸಚಿವ ರೈ
ಬಂಟ್ವಾಳ: ಈ ಹಿಂದೆ ಆರ್ಥಿಕ ಮತ್ತು ಸಾಮಾಜಿಕ ಪ್ರಾಬಲ್ಯ ಹೊಂದಿದವರು ಮಾತ್ರ ಬಲಾಢ್ಯರಾಗಿ ರಾಜಕೀಯ ರಂಗದಲ್ಲಿ ಬೆಳೆದು ಆಡಳಿತ ನಡೆಸುತ್ತಿದ್ದು, ಪಂಚಾಯತ್ ರಾಜ್ ಮಸೂದೆ ತಿದ್ದುಪಡಿ ಬಳಿಕ ಜನ ಸಾಮಾನ್ಯರಿಗೆ ಕೂಡಾ ರಾಜಕೀಯವಾಗಿ ಅಧಿಕಾರ ಸಿಗುತ್ತಿದೆ. ಇದರಿಂದಾಗಿ ಪ್ರಸಕ್ತ ಪರಿಶಿಷ್ಟ ಜಾತಿ ಮತ್ತಿತರ ಹಿಂದುಳಿದ ವರ್ಗ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ಸುಭಾಸ್ ನಗರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವಿಜೇತ ಸದಸ್ಯರು ಮತ್ತು ಪಕ್ಷ ಕಾರ್ಯಕರ್ತರನ್ನು ಅಭಿನಂದಿಸಿ ಅವರು ಮಾತನಾಡಿದರು.
ಸಜೀಪಮೂಡ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡ ಕೆ.ಸಂಜೀವ ಪೂಜಾರಿ ನೇತೃತ್ವದಲ್ಲಿ ಸ್ಪರ್ಧಿಸಿದ್ದ ನೈಜ ಕಾಂಗ್ರೆಸ್ಸಿಗರನ್ನು ಹುಡುಕಿ ಗೆಲ್ಲಿಸುವ ಮಹತ್ಕಾರ್ಯವನ್ನು ಇಲ್ಲಿನ ಗ್ರಾಮೀಣ ಮತದಾರರು ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಶುಭ ಹಾರೈಸಿದರು.
ಸ್ಥಳೀಯ ಜಿ.ಪಂ.ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ. ಸದಸ್ಯೆ ಪುಷ್ಪಾವತಿ, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಅಲಿ, ಮಾಜಿ ಜಿ.ಪಂ.ಸದಸ್ಯ ಎಸ್.ಅಬ್ಬಾಸ್ ಉಪಸ್ಥಿತರಿದ್ದರು. ಆರಂಭದಲ್ಲಿ ಗ್ರಾ.ಪಂ. ವಿಜೇತ ಸದಸ್ಯರಾದ ಅಬ್ದುಲ್ ಅಜೀಜ್, ಗಣಪತಿ ಭಟ್, ವಿಶ್ವನಾಥ ಬೆಳ್ಚಡ, ರಮೇಶ್ ಎಂ., ಅಬ್ದುಲ್ ಕುಂಞ, ಹರಿಣಾಕ್ಷಿ, ಸರಸ್ವತಿ ಭಟ್, ತುಮಿನಾ ಶಾಂತಿ ಡಿ’ಸೋಜ, ಯಮುನಾ, ಚಂಚಲಾಕ್ಷಿ, ಲೀನಾ ಮಿರಾಂದ, ಸುಂದರಿ, ಯಮುನಾ ಕೊಟ್ಟಾರಿಪಾಲು ಇವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಇಲ್ಲಿನ ಬಡಜನತೆ ಶೋಷಣೆ, ದೌರ್ಜನ್ಯ ಮತ್ತು ಏಕಚಕ್ರಾಧಿಪತ್ಯ ಎದುರಿಸಿದ್ದು, ಈ ಬಾರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೆಲುವು ದೊರೆತಿದೆ ಎಂದರು. ನಾಗೇಶ್ ವಂದಿಸಿದರು. ನಝೀರ್ ಕುಕ್ಕಾಜೆ ಮತ್ತು ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.
