ಬಂಟ್ವಾಳ: ಮಂಗಳೂರು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಿದ್ಧಕಟ್ಟೆ ಘಟಕದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ , ಶಾಲಾ ಶುಲ್ಕ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಬಂಟ್ವಾಳ ತಾಲೂಕು ರಾಯಿ ಲೋಬೋ ಕಾಂಪ್ಲೆಕ್ಸ್ನಲ್ಲಿ ಜೂ.7ರಂದು ಜರಗಿತು.
ಬಿಲ್ಲವ ಸಮಾಜ ಸೇವಾ ಮಹಾ ಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಸರ್ವ ಧರ್ಮಗಳ ಧರ್ಮಗುರುಗಳು ಜನರಲ್ಲಿ ಸಾಮರಸ್ಯದ ಜನಜಾಗೃತಿ ಸೇವೆಯನ್ನು ಹಮ್ಮಿಕೊಳ್ಳುವ ಮೂಲಕ ನಿಜವಾದ ದೇವರನ್ನು ಕಾಣಬಹುದು. ಮಾನವೀಯತೆಯ ಮಾನವ ಧರ್ಮ ಎಂಬುವುದೇ ನಿಜವಾದ ಧರ್ಮವಾಗಿದೆ. ಜಾತಿ,ಮತ, ಧರ್ಮ ಭೇದವಿಲ್ಲದೆ ಈ ಸಂಸ್ಥೆ ವಿದ್ಯಾದಾನಕ್ಕೆ ನೀಡುತ್ತಿರುವ ಸಹಕಾರ ಶ್ಲಾಘನೀಯ. ಮತ್ತು ಈ ಕಾರ್ಯಕ್ರಮದ ಪ್ರಾಯೋಜಕರಾದ ರೋಹನ್ ಮೊಂತೆರೋ ಅವರು ಅಭಿನಂದನಾರ್ಹರು ಎಂದು ಹೇಳಿದರು.

ಮಾನವಹಕ್ಕು ಪರಿಷತ್ ರಾಷ್ಟ್ರೀಯ ಅಧ್ಯಕ್ಷ ರೋಬರ್ಟ್ ಡಿಸೋಜ ಅವರು ಅತಿಥಿಯಾಗಿ ಮಾತನಾಡಿ ನೆರೆಹೊರೆಯವರ ಕಷ್ಟಗಳಿಗೆ ಸ್ಪಂದಿಸಿ ಸಹಾಯ ಮಾಡುವ ಮೂಲಕ ದೇವರ ಪ್ರೀತಿಗಳಿಸಿ ಎಂದು ಹೇಳಿದರು.
ಯುನೈಟೆಡ್ ಕ್ರಿಶ್ವಿಯನ್ ಅಸೋಸಿಯೇಶನ್ ಕೇಂದ್ರೀಯ ಸಮಿತಿ ಅಧ್ಯಕ್ಷ ಆಲ್ಬನ್ ಮಿನೇಜಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಘಟನೆಯು ಕೇವಲ ಸೇವೆಯ ಪ್ರತೀಕ ಹಾಗೂ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಏಕೈಕ ಸ್ವತಂತ್ರ ಸಂಸ್ಥೆ . ಈ ಸಂಸ್ಥೆಯಲ್ಲಿ ಯಾವ ರಾಜಕಾರಣಿಗಳು ಹಾಗೂ ಧಾರ್ಮಿಕ ಮುಖಂಡರ ಹಸ್ತಕ್ಷೇಪವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಟ್ವಾಳ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪಿಯುಸ್ ಎಲ್. ರೋಡ್ರಿಗಸ್ ಅವರನ್ನು ಸಮ್ಮಾನಿಸಲಾಯಿತು. ಸುಮಾರು 200 ವಿದ್ಯಾರ್ಥಿಗಳಿಗೆ ಸಮವಸ್ತ್ರ , ಶಾಲಾಶುಲ್ಕ ಹಾಗೂ ಉಚಿತ ಲೇಖನ ಪುಸ್ತಕಗಳ ವೆಚ್ಚದ ಸುಮಾರು 9 ಲಕ್ಷ ರೂ.ಗಳ ಚೆಕ್ಕನ್ನು ವಿತರಿಸಲಾಯಿತು. ಈ ವೇಳೆ ಮಾನವ ಹಕ್ಕು ಸಂಘಟನಾ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ರೋಬರ್ಟ್ ಡಿಸೋಜ ಅವರು ಪರಿಷತ್ನ ಬಂಟ್ವಾಳ ತಾಲೂಕಿನ ಅಧ್ಯಕ್ಷರಾಗಿ ಕೆ.ಪಾವ್ಲ್ ಲೋಬೋ ಅವರ ನೇಮಕಾತಿಯನ್ನು ಘೋಷಿಸಿದರು. ಜಿಲ್ಲಾಧ್ಯಕ್ಷ ಆನಂದ ಶೆಟ್ಟಿ , ಉಪಾಧ್ಯಕ್ಷ ರಾಕೇಶ್ ಶೆಣೈ ಉಪಸ್ಥಿತರಿದ್ದರು.
ಸಿದ್ಧಕಟ್ಟೆ ಘಟಕದ ಅಧ್ಯಕ್ಷ ಪಾವ್ಲ್ ಲೋಬೋ ಅವರು ಸ್ವಾಗತಿಸಿದರು. ಸಹ ಕಾರ್ಯದರ್ಶಿ ಆ್ಯಂಟನಿ ಡಿಸೋಜ ವಂದಿಸಿದರು. ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
