ಬಂಟ್ವಾಳ: ಕಾಲೇಜು ಯುವಜನರು ಕೈಯ್ಯಲ್ಲಿ ಫಲ ಬೀಜ ಮತ್ತು ಫಲ ಗಿಡಗಳನ್ನು ಹಿಡಿದು ‘ಅವ್ವ ನಿನಗೆ ಶರಣು, ಬೀಜವೇ ನಿನಗೆ ಶರಣು..’ ಎಂದು ಹಾಡುತ್ತಾ ಹಸಿರನ್ನು ಉಳಿಸುವ, ಬೆಳೆಸುವ ಪ್ರತಿಜ್ಞೆಗೈದು ಬೀಜ ಬಿತ್ತಿ ಗಿಡ ನೆಡುವ ಮೂಲಕ ಅರಿವು ಯುವ ಸಂವಾದ ಕೇಂದ್ರ ಆಯೋಜಿಸಿದ್ದ ‘ವಿಶ್ವ ಪರಿಸರ ದಿನಾಚರಣೆ’ ಯನ್ನು ಬಿ.ಸಿ.ರೋಡಿನ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ವಿನೂತನ ರೀತಿಯಲ್ಲಿ ಜೂ.5ರ ಶುಕ್ರವಾರ ಆಚರಿಸಲಾಯಿತು.


ಪರಿಸರ ಗೀತೆಗಳ ಕಲಿಕೆ, ಪರಿಸರದ ಚಿತ್ರ ರಚನೆ, ಪರಿಸರ ಪುಸ್ತಕಗಳ ಓದು-ಸಂವಾದ ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಬೆಳಗಿನಿಂದ ಸಂಜೆವರೆಗೆ ಪರಿಸರದ ಮಹತ್ವ, ಸಮಸ್ಯೆ, ನಮ್ಮ ಜವಾಬ್ದಾರಿಗಳ ಬಗೆಗೆ ಯುವಜನರಲ್ಲಿ ಅರಿವು ಮೂಡಿಸಲಾಯಿತು. ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಸರಸ್ವತಿ, ಖ್ಯಾತ ಪರಿಸರ ಕವಿ ಜನಾರ್ದನ ಕೆಸರಗದ್ದೆ ಮತ್ತು ಅರಿವು ಯುವ ಸಂವಾದ ಕೇಂದ್ರದ ಒಡನಾಡಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




