ಬಂಟ್ವಾಳ: ಇದು ನಾಲ್ಕು ರಸ್ತೆಗಳು ಕೂಡುವ ಸಂಗಮ ಸ್ಥಳ. ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗುವ ಪ್ರಮುಖ ನೆಲ. ಒಂದಷ್ಟು ಅಂಗಡಿ-ಮುಗ್ಗಟ್ಟುಗಳು, ವ್ಯಾಪಾರ ಮಳಿಗೆಗಳು, ಸೊಸೈಟಿ, ಗ್ಯಾರೇಜ್ ಹೀಗೆ ಎಲ್ಲವೂ ಇಲ್ಲಿರುವುದರಿಂದ ಹಾಗೂ ನಾಲ್ಕು ರಸ್ತೆಗಳಿಂದಲೂ ಬಂದ ಬಸ್ಸುಗಳು ಇಲ್ಲಿ ಪ್ರಯಾಣಿಕರನ್ನು ಇಳಿಸಲು, ಹತ್ತಿಸಲು ನಿಲ್ಲಿಸುವುದರಿಂದ ನಿಜಕ್ಕೂ ಇದು ನಿತ್ಯ ಜನನಿಬಿಡ, ವಾಹನದಟ್ಟಣೆಯ ಕೇಂದ್ರ.
ಇಲ್ಲಿಗೆ ಹೆಸರೇ ಬಂಟ್ವಾಳ ಬೈಪಾಸ್ ಜಂಕ್ಷನ್. ಆದರೆ ಎಲ್ಲವೂ ಇಲ್ಲಿದ್ದರೂ ಭಾರಿ ಅಗತ್ಯವಾದ ಸಾರ್ವಜನಿಕ ಶೌಚಾಲಯ ಇಲ್ಲಿಲ್ಲದಿರುವುದು ಇಲ್ಲಿನ ವ್ಯಾಪಾರಸ್ಥರು, ಉದ್ಯೋಗಿಗಳು ಹಾಗೂ ಪ್ರಯಾಣಿಕರ ಪಾಲಿಗೆ ದೊಡ್ಡ ಟೆಂಕ್ಷನ್.
ಬೇರೆ ಬೇರೆ ಊರುಗಳಿಂದ ಬಂದ ಜನರು ಮೂಡಬಿದ್ರೆ, ವಾಮದಪದವು, ಧರ್ಮಸ್ಥಳ, ಬಿ.ಸಿರೋಡು, ಮಂಗಳೂರು ಮೊದಲಾದೆಡೆಗಳಿಗೆ ಹೋಗಲು ಇಲ್ಲಿ ತಂಗುವುದು ಸಾಮಾನ್ಯ. ಹತ್ತಿರದಲ್ಲೆ ಇರುವ ಶಾಲೆ-ಕಾಲೇಜುಗಳಿಗೆ ಹೋಗುವವರು ಇಲ್ಲಿ ಬಂದು ಸೇರುವುದು ಅನಿವಾರ್ಯ. ಇನ್ನೂ ಬಂಟ್ವಾಳ ಪೇಟೆಗೆ, ಇಲ್ಲವೇ ಬೈಪಾಸ್‍ಗೆಂದೇ ನಿತ್ಯ ವ್ಯವಹಾರ ಹಾಗೂ ಉದ್ಯೋಗದ ನೆಲೆಯಲ್ಲಿ ಇಲ್ಲಿ ಬರುವವರ ಸಂಖ್ಯೆಯೂ ಸಾಕಷ್ಟು. ಕೆಲವೊಮ್ಮೆ ಬಸ್ಸಿಗೆ ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಗಿದ್ದು ಈ ಸಂದರ್ಭ ತುರ್ತು ಮಲ, ಮೂರ್ತ ವಿಸರ್ಜನೆಗೆಂದು ಜನರು ಅತ್ತಿಂದಿತ್ತ ಅಲೆದಾಡುವುದು, ಶೌಚಾಲಯ ಎಲ್ಲಿದೆ ಎಂದು ಕೇಳುವ ದೃಶ್ಯ ಇಲ್ಲಿ ಸರ್ವೇ ಸಾಮಾನ್ಯ.
bypas
ಇಲ್ಲ, ಎಲ್ಲಿ ಹುಡುಕಿದರೂ ಶೌಚಾಲಯವಿಲ್ಲ. ಶಾಲಾ ಮಕ್ಕಳು, ಗಂಡಸರು ಅಲ್ಲಿಲ್ಲಿ, ಯಾರಿಗೋ ಕಾಣದ ಜಾಗ ಹುಡುಕಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಆದರೆ ಮಹಿಳೆಯರ ಪಾಡಂತೂ ಹೇಳುವವರಿಲ್ಲ, ಕೇಳುವವರಿಲ್ಲದ ಸ್ಥಿತಿ.
ಬಂಟ್ವಾಳ ಪೇಟೆ ಈಗ ಬಂಟ್ವಾಳ ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಹಿನ್ನೆಲೆಯಲ್ಲಿ ಬಂಟ್ವಾಳ ಬೈಪಾಸ್ ಕೂಡ ಇಂದು ನಗರವಾಗಿ ಬೆಳೆಯತೊಡಗಿದೆ. ಈಗಿರುವ ಬಂಟ್ವಾಳ ಪೇಟೆ ತೀರಾ ಕಿರಿದಾಗುತ್ತಿರುವ, ಇಕ್ಕಟ್ಟಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಬೈಪಾಸ್ ಜಂಕ್ಷನ್ ಒಂದಷ್ಟು ವ್ಯವಹಾರಿಕವಾಗಿಯೂ ವಿಸ್ತಾರವಾಗಿ ಬೆಳೆಯತೊಡಗಿದೆ. ಸಾಕಷ್ಟು ವಾಣಿಜ್ಯ ಸಂಕೀರ್ಣಗಳು, ವ್ಯವಹಾರ ಮಳಿಗೆಗಳು ಇಲ್ಲಿಯೂ ತಲೆ ಎತ್ತತೊಡಗಿದೆ. ಅಲ್ಲದೆ ದೂರ ದೂರುಗಳಿಂದ ಬಸ್ಸಿನಲ್ಲಿ ಬರುವ ಪ್ರಯಾಣಿಕರು ಬಂಟ್ವಾಳ ಪೇಟೆಗೆ ಹೋಗಬೇಕಾದರೆ ಇಲ್ಲಿಯೇ ಇಳಿದು ಆಟೋ ಇಲ್ಲವೇ ನಡೆದುಕೊಂಡು ಹೋಗುವ ಸ್ಥಿತಿಯೂ ಇಲ್ಲಿದೆ. ಇದರಿಂದಾಗಿಯೂ ಇಲ್ಲಿ ಜನದಟ್ಟಣೆ ಸಹಜವಾಗಿಯೇ ಹೆಚ್ಚುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಆಟೋ ರಿಕ್ಷಾ ಸಹಿತ ಇತರ ವಾಹನಗಳೂ ಇಲ್ಲಿ ಪಾರ್ಕಿಂಗ್ ಮಾಡುತ್ತಿದೆ, ಜನ ಸೇವೆ ನೀಡುತ್ತಿದೆ. ತಾಲೂಕಿನ ಹತ್ತಾರು ಊರುಗಳಿಂದ ನಿತ್ಯ ವ್ಯವಹಾರ, ಶಿಕ್ಷಣ, ಉದ್ಯೋಗಕ್ಕಾಗಿ ಭಾರಿ ಸಂಖ್ಯೆಯಲ್ಲಿ ಜನ ಇಲ್ಲಿ ಬರುವುದರಿಂದ ಬಂಟ್ವಾಳ ಬೈಪಾಸ್ ಎನ್ನುವುದು ಈಗ ನಿತ್ಯ ಜನನಿಬಿಡ, ವಾಹನದಟ್ಟಣೆ ಇರುವ ಪೇಟೆ.
ಆದರೆ ವಿವಿಧ ಉದ್ದೇಶಗಳಿಗಾಗಿ ಇಲ್ಲಿ ಸೇರುವ ಎಲ್ಲರಿಗೂ ಅನುಕೂಲವಾಗುವ ಸುಸಜ್ಜಿತ ಶೌಚಾಲಯ ಇಲ್ಲದಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದ್ದು ಪೇಟೆಯಲ್ಲಿರುವ ವಾಹನಗಳ ಮಾಲಕ-ಚಾಲಕರು, ವಿವಿದೆಡೆ ಇರುವ ಉದ್ಯೋಗಿಗಳು, ವ್ಯವಹಾರ ನಿಮಿತ್ತ ಬರುವ ಗ್ರಾಹಕರು ಪರದಾಡುವುದು ತಪ್ಪಿಲ್ಲ.
ಈ ಜಂಕ್ಷನ್‍ನ ನಾಲ್ಕು ದಿಕ್ಕಿನಲ್ಲಿರುವ ನಾಲ್ಕು ರಸ್ತೆಗಳ ಉದ್ದಕ್ಕೂ ಅಂಗಡಿ-ಮುಗ್ಗಟ್ಟುಗಳು, ಬೃಹತ್ ವಾಣಿಜ್ಯ ಸಂರ್ಕಿರ್ಣಗಳು, ಸಭಾಂಗಣಗಳು, ಮನೆಗಳಿದೆ. ಅದ್ದರಿಂದ ರಸ್ತೆಯಂಚಿನಲ್ಲೇ, ಅಂದರೆ ತೀರಾ ಸುಲಭವಾಗಿ ಎಲ್ಲಾದರೂ ದೇಹಭಾದೆ ತೀರಿಸೋಣವೆಂದರೆ ಅದೂ ಸಾಧ್ಯವಿಲ್ಲ. ಮತ್ತೆ ಅದಕ್ಕಾಗಿ ಭಾರಿ ದೂರ, ಯಾರೂ ನೋಡದ ಜಾಗ ಹುಡುಕಬೇಕು, ಇಲ್ಲವೇ ಚಾ ಕುಡಿಯುವ ನೆಪದಲ್ಲಿ ಹೋಟೆಲಿಗಾದರೂ ಹೋಗಬೇಕು, ಅಲ್ಲಿಯೂ ಶೌಚಾಲಯವಿದ್ದರೆ ಬಚಾವ್..ಇಲ್ಲದಿದ್ದರೆ ಮತ್ತೆ ಹುಡುಕಾಟ… ನಗರದ ನೈರ್ಮಲ್ಯ, ಶುಚಿತ್ವ, ಸಾರ್ವಜನಿಕರ ಅನುಕೂಲ ದೃಷ್ಠಿಯಿಂದ ಮುಖ್ಯ ಮೂಲಭೂತ ಸೌಲಭ್ಯವಾದ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸುವುದು ತೀರಾ ಅಗತ್ಯವಾಗಿದೆ.

ಎ.ಗೋಪಾಲ ಅಂಚನ್

By Suddi9

Leave a Reply

Your email address will not be published. Required fields are marked *