ಶೈಕ್ಷಣಿಕ ಸಾಲಿನ ಶಾಲಾ ಮಕ್ಕಳ ಶಿಕ್ಷಣ ಪ್ರಗತಿಯ ಅಂತಿಮ ಪಕ್ಷಿನೋಟದ ಸಮಯೋಚಿತ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಹಮ್ಮದ್ ಸಾಲೆ ಅಧ್ಯಕ್ಷತೆಯಲ್ಲಿ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿ ಜರುಗಿತು. ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಸೇರಿದ್ದ 150 ಮಂದಿ ಪೋಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ಜನಪ್ರತಿನಿಧಿಗಳು ಹಾಗೂ ಶಾಲಾ ಶಿಕ್ಷಕವೃಂದ ಒಟ್ಟು ಸೇರಿ ವಿದ್ಯಾರ್ಥಿಗಳ ಮತ್ತು ಶಾಲೆಯ ಭೌತಿಕ ಅಭಿವೃದ್ಧಿಯ ಬಗ್ಗೆ ಚಿಂತನವನ್ನು ನಡೆಸಲಾಯಿತು. ಪ್ರತೀ ವರ್ಷ ಸರಾಸರಿ ಉತ್ತಮ ಫಲಿಂತಾಶವನ್ನು ದಾಖಲಿಸುತ್ತಾ ಬರುತ್ತಿರುವ ಈ ಶಾಲೆ ಬಂಟ್ವಾಳ ತಾಲೂಕಿನ ಅತ್ಯುತ್ತಮ ಶಾಲೆಗಳಲ್ಲೊಂದಾಗಿರುವುದು ಹೆಮ್ಮೆ ಎಂಬುದಾಗಿ ಎಲ್ಲರ ಅನಿಸಿಕೆಯಾಯಿತು.

- ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಳ್ನಾಡು ಕ್ಷೇತ್ರದ ಜಿ. ಪಂ. ಸದಸ್ಯರಾದ ಶ್ರೀ ಎಂ.ಎಸ್ ಮಹಮ್ಮದ್ ಮಾತನಾಡಿ ಬದಲಾದ ಕಾಲಘಟ್ಟದಲ್ಲಿ ಪೋಷಕರು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ಇಡುವುದು ಅನಿವಾರ್ಯವಾಗಿದೆ. ಸಮಾಜದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಎಚ್ಚರಿಕೆಯಿಂದಿದ್ದು ಅವರ ದೈನಂದಿನ ಚಟುವಟಿಕೆಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸುವ ಮೂಲಕ ಮಕ್ಕಳ ಸುಂದರ ಭವಿಷ್ಯವನ್ನು ರೂಪಿಸಬೇಕು ಎಂದರು.
ಕೊಳ್ನಾಡು ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀ ಮಹಮ್ಮದ್ ಮಂಚಿ ಮಾತನಾಡಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಎಂಟನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭವಾಗಿರುವುದು ಗ್ರಾಮೀಣ ಭಾಗದ ಪ್ರತಿಭಾವಂತ ಬಡಮಕ್ಕಳಿಗೆ ತುಂಬಾ ನೆರವಾಗಿದೆ. ಸರಕಾರದ ಎಲ್ಲಾ ಸೌಲಭ್ಯಗಳೊಂದಿಗೆ ಉಚಿತ ಆಂಗ್ಲ ಶಿಕ್ಷಣವನ್ನು ಸ್ವಯಂ ಆಸಕ್ತಿಯಿಂದ ನೀಡಲು ಮುಂದಾಗಿರುವ ಶಿಕ್ಷಕ ವೃಂದ ಅತ್ಯಂತ ಪ್ರಶಂಸನೀಯರು ಮತ್ತು ಈ ಉತ್ತಮ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಬೇಕೆಂದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ ನೂಜಿಬೈಲು ಶ್ರೀ. ನಾರಾಯಣ ಭಟ್ ಮತ್ತು ಶ್ರೀ ದಿವಾಕರ ಕುಂಟೂರು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ದಾಖಲೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಉದಯಕುಮಾರ ರಾವ್, ಇಸ್ಮಾಯಿಲ್ ಕೋಕಳ, ಇಸುಬು ಕೋಕಳ,ಶ್ರೀಮತಿ ಮೋಹಿನಿ ಕುಂಟೂರು, ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿ. ಶ್ರೀರಾಮಮೂರ್ತಿ ಸ್ವಾಗತಿಸಿದರು. ಕಲಾ ಶಿಕ್ಷಕ ವಿಶಾಂತ್ ಮಾರ್ಕರ್ ಡಿ ಸೋಜ ವಂದಿಸಿದರು. ಶ್ರೀ ವೆಂಕಟೇಶ್ ಕಲ್ಯಾಣತ್ತಾಯ ಕಾರ್ಯಕ್ರಮ ನಿರ್ವಹಿಸಿದರು.
