ಕೆಲ್ಲಪುತ್ತಿಗೆಯಲ್ಲಿ ಪಾಯೋಗಿಕವಾಗಿ ಪೋಡಿ ಅದಾಲತ್ : ಡಾ ಅಶೋಕ್ ಕುಮಾರ್
ಮೂಡುಬಿದರೆ: ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿದ ಸಮಸ್ಯೆಗಳನ್ನು ಪರಿಹರಿಸಿ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಮುಂದಿನ ದಿನಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಪೋಡಿ ಅದಾಲತ್ ನಡೆಸಲಾಗುವುದು. ಮೂಡುಬಿದರೆ ಹೋಬಳಿಯ ಕೆಲ್ಲಪುತ್ತಿಗೆಯಲ್ಲಿ ಪ್ರಾಯೋಗಿಕವಾಗಿ ಇದನ್ನು ಪ್ರಾರಂಭಿಸಲಾಗುವುದು ಎಂದು ಸಹಾಯಕ ಕಮೀಷನರ್ ಡಾ ಅಶೋಕ್ ಕುಮಾರ್ ತಿಳಿಸಿದರು.
ಮೂಡುಬಿದರೆಯ ಸಮಾಜ ಮಂದಿರದಲ್ಲಿ ಗುರುವಾರ ನಡೆದ ಮೂಡುಬಿದರೆ ಹೋಬಳಿ ಮಟ್ಟದ ಕಂದಾಯ ಅದಾಲತ್‍ನ ಅಧ್ಯಕ್ಷತೆ ವಹಿಸಿ ನಾಗರಿಕರಿಂದ ಅವರು ಅಹವಾಲು ಸ್ವೀಕರಿಸಿದರು. ಕಂದಾಯ ಇಲಾಖೆಯಲ್ಲಿ ಜನರಿಗೆ ಅತೀ ಅಗತ್ಯವಾಗಿರುವ ಪಹಣಿಯ ದೋಷಗಳನ್ನು ಸರಿಪಡಿಸುವ ಮತ್ತು ಪಹಣಿಯಲ್ಲಿ ಹೆಸರನ್ನು ಕ್ರೋಡಿಕರಿಸುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಕಂದಾಯ ಅದಾಲತ್‍ಗಳನ್ನು ನಡೆಸಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
18 ಕಂದಾಯ ಅದಾಲತ್:
ತಹಸೀಲ್ದಾರ್ ಮಹಮ್ಮದ್ ಇಸಾಕ್ ಮಾತನಾಡಿ ಈಗಾಗಲೇ 18 ಕಂದಾಯ ಅದಾಲತ್‍ಗಳನ್ನು ನಡೆಸಲಾಗಿದ್ದು ಆರ್‍ಟಿಸಿ ದೋಷ ಮತ್ತು ಕ್ರೋಡಿಕರಣಕ್ಕಾಗಿ 1,726 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು 1,705 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. 94ಸಿ ಪ್ರಕಾರ 2,331 ಅರ್ಜಿಗಳು ಬಂದಿದ್ದು ಈ ಪೈಕಿ 20 ಮಂದಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಡೀಮ್ಡ್ ಫಾರೆಸ್ಟ್ ಮತ್ತು ಕುಮ್ಕಿ ಭೂಮಿಯ ಕುರಿತು ಸಮಸ್ಯೆಗಳಿದ್ದು ಅವುಗಳ ನಿವಾರಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಮೂಡುಬಿದರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ 3,500ರಷ್ಟು ಅರ್ಜಿಗಳು ಇತ್ಯರ್ಥವಾಗಲು ಬಾಕಿ ಇದ್ದು ಡೀಮ್ಡ್ ಫಾರೆಸ್ಟ್‍ನ ಸಮಸ್ಯೆ ಮತ್ತು ಕುಮ್ಕಿ ಹಕ್ಕಿನ ಸಮಸ್ಯೆಗಳು ನಿವಾರಣೆಯಾದ ಬಳಿಕ ಈ ಎಲ್ಲಾ ಕಡತಗಳನ್ನು ಇತ್ಯರ್ಥ ಮಾಡಲಾಗುವುದು ಎಂದು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಪಿ.ಕೆ ಥೋಮಸ್ ಹೇಳಿದರು.
ಸವಲತ್ತು ವಿತರಣೆ:
ಮೂಡುಬಿದರೆ ಹೋಬಳಿ ಕಂದಾಯ ಅದಾಲತ್ – 373 ಮಾಸಾಶನ ಮಂಜೂರಾತಿ, 94 ಲಕ್ಷ ಪರಿಹಾರ ವಿತರಣೆ ಮಾಡಲಾಯಿತು. ಸಂಧ್ಯಾ ಸುರಕ್ಷ, ವಿಕಲಚೇತನ, ಮನಸ್ವಿನಿ, ವಿಧವಾವೇತನ, ವೃದ್ಧಾಪ್ಯ ವೇತನಗಳಿಗೆ ಸಂಬಂಧಿಸಿ ಒಟ್ಟು 373 ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು ಹಾಗೂ ರಾಷ್ಟ್ರೀಯ ಕುಟುಂಬ ಪರಿಹಾರ ಯೋಜನೆಯಡಿ 47 ಮಂದಿ ಫಲಾನುಭವಿಗಳಿಗೆ ತಲಾ 20 ಸಾವಿರದಂತೆ 94 ಲಕ್ಷ ರೂಪಾಯಿಗಳ ಚೆಕ್ಕನ್ನು ವಿತರಿಸಲಾಯಿತು. ಹಾಗೂ 20 ಮಂದಿ ಫಲಾನುಭವಿಗಳಿಗೆ 94ಸಿ ಪ್ರಕಾರ ಹಕ್ಕು ಪತ್ರ ವಿತರಿಸಲಾಯಿತು. ಹಾಗೂ ಅಕ್ರಮ ಸಕ್ರಮ ಯೋಜನೆಯಡಿ 2 ಮಂದಿಗೆ ಹಕ್ಕು ಪತ್ರ ವಿತರಿಸಲಾಯಿತು.
ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಉಪಾಧ್ಯಕ್ಷೆ ಎಲಿಜಾ ಮಿನೇಜಸ್, ಮೂಡಾದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಜಿ.ಪಂ ಸದಸ್ಯೆ ಅಂಬಿಕಾ ಡಿ.ಶೆಟ್ಟಿ, ತಾ.ಪಂ ಅಧ್ಯಕ್ಷೆ ರಜನಿ, ಸದಸ್ಯರಾದ ಪ್ರಕಾಶ್ ನಾಯ್ಕ, ರಮೇಶ್ ಪೂಜಾರಿ, ಪ್ರೇಮಾ ನಾಯ್ಕ್, ಪಾಲಡ್ಕ ಗ್ರಾ.ಪಂ ಅಧ್ಯಕ್ಷ ಸತೀಶ್ ಆಚಾರ್ಯ, ಹೊಸಬೆಟ್ಟು ಗ್ರಾ.ಪಂ.ಅಧ್ಯಕ್ಷ ರೀಟಾ ಕುಟಿನ್ಹ, ದರೆಗುಡ್ಡೆ ಗ್ರಾ.ಪಂ.ಅಧ್ಯಕ್ಷ ಸುಭಾಶ್ ಪಡಿವಾಳ್ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಮಹಮ್ಮದ್ ಅಸ್ಲಾಂ, ಸುಂದರ ಸಿ ಪೂಜಾರಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ ಫಲಾನುಭವಿಗಳ ವಿವರ ನೀಡಿದರು.
.

