ಕೈಕಂಬ: ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಬಬ್ಬು ದೈವಸ್ಥಾನದಲ್ಲಿ ಮಾರ್ಚ್ 7ರಿಂದ 8ರ ತನಕ ಕೋರ್ದಬ್ಬು ಪರಿವಾರ ದೈವಗಳ ನೇಮೋತ್ಸವ ಜರುಗಿತು. ಭಾನುವಾರ ಸಂಜೆ ಮೂರು ಗಂಟೆಗೆ ರಾಹುಗುಳಿಗನಿಗೆ ಅರದಲ(ಬಣ್ಣ) ಹಾಕುತ್ತಿದ್ದಂತೆ ಚಾಪೆಯಿಂದಲೇ ಎದ್ದುಬಂದ ರಾಹುಗುಳಿಗ ದೈವ ತನ್ನ ಉಗ್ರ ಪ್ರತಾಪವನ್ನು ತೋರಿಸಿತು. ಭಕ್ತರಿಗೆ ಭಯ ಹುಟ್ಟಿಸುತ್ತಾ ಅಭಯದ ಮಾತುಗಳನ್ನು ಹೇಳುತ್ತಾ, ಊರಿನ ಕೆಲವು ಲೋಪದೋಷಗಳನ್ನು ಕೈಸನ್ನೆಯಲ್ಲೇ ಹೇಳುವುದನ್ನು ನೋಡಿದ ಭಕ್ತರು ಭಕ್ತಿ ಪರವಶರಾದರು. ದೈವಸ್ಥಾನದಿಂದ ಹೊರಬಂದ ದೈವ ಓಡುತ್ತಿದ್ದು ಅದನ್ನು ಹಿಡಿಯಲು ಜನರು ಹರಸಾಹಸಪಟ್ಟರು.
ಕೈಲಾಸದಿಂದ ಇಳಿದುಬಂದ ರಾಹುಗುಳಿಗ ತುಳುನಾಡಲ್ಲಿ ಅಬ್ಬರದ ಪ್ರತಾಪ ತೋರಿಸಿದ ಎಂಬುವುದಕ್ಕೆ ಐತಿಹ್ಯವಿದೆ. ಎಷ್ಟು ತಿಂದರೂ ಹೊಟ್ಟೆ ಹಸಿವಿನಿಂದ ಕಂಗಾಲಾಗುವ ದೈವಕ್ಕೆ ವಿಷ್ಣು ದೇವರು ತನ್ನ ಕಿರುಬೆರಳನಿಂದ ರಕ್ತ ತರ್ಪಣ ನೀಡಿದರೂ ಹಸಿವು ನೀಗಿಸಿಕೊಳ್ಳಲಾಗದ ದೈವವನ್ನು ಕಂಡು ದೇವರು ತನ್ನ ಉಗ್ರರೂಪವನ್ನು ಬಿಟ್ಟು ಶಾಂತರಾಗುವಂತೆ ಕೋರಿದರು. ಕೊನೆಗೆ ತುಳುನಾಡನ್ನು ರಕ್ಷಣೆ ಮಾಡುವಂತೆ ಭಿನ್ನವಿಸಿದಾಗ ಅದಕ್ಕೆ ಒಪ್ಪಿದ ರಾಹುಗುಳಿಗ ದೈವ ತುಳುನಾಡಿನ ಭಕ್ತರನ್ನು ಸಲಹುತ್ತಾ ಬರುತ್ತಿದ್ದಾನೆ. ಸ್ವಲ್ಪ ತಪ್ಪಿದರೂ ಯಾವುದೇ ಕ್ಷಮೆ ಕೊಡದೆ ಶಿಕ್ಷಿಸುತ್ತಾನಾದರೂ ಗುಳಿಗ ದೈವ ಕರುಣಾಮಯಿ, ಭಕ್ತಯಿಂದ ಬೇಡಿದರೆ ತಕ್ಷಣ ತಮ್ಮ ಕೋರಿಕೆಯನ್ನು ನೀಗುತ್ತಾನೆ ಎಂಬ ನಂಬಿಕೆ ಇದೆ.
ಫೊಟೋ ತೆಗೆಯುವಂತಿಲ್ಲ:
ವಿಶೇಷವೆಂದರೆ ರಾಹುಗುಳಿಗನ ನೇಮೋತ್ಸವ ನಡೆಯುವಾಗ ಯಾರಾದರೂ ಮೊಬೈಲ್ ಕೆಮರಾದಲ್ಲಿ ಶೂಟಿಂಗ್ ನಡೆಸುವುದು ಗೊತ್ತಾದರೆ ದೈವ ಸಿಟ್ಟಿಗೇಳುತ್ತದೆ. ಹಲವು ವರ್ಷಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಮಡುತ್ತಿದ್ದ ಸಂದರ್ಭ ಮೊಬೈಲನ್ನೇ ದೈವ ಒಡೆದು ಹಾಕಿದ ಉದಾಹರಣೆಗಳಿವೆ. ಆದ್ದರಿಂದ ಯಾರೂ ಕೂಡಾ ಗುಳಿಗ ದೈವದ ಕೋಲದ ವಿಡಿಯೋ ಶೂಟಿಂಗ್ ನಡೆಸುವ ಸಾಹಸಕ್ಕೆ ಕೈಹಾಕುವುದಿಲ್ಲ. ಯಾರಾದರೂ ಗುಟ್ಟಾಗಿ ವಿಡಿಯೋ ನಡೆಸುವುದು ಗೊತ್ತಾದರೂ ಸಹ ದೈವ ವಿಪರೀತ ಸಿಟ್ಟುಗೊಳ್ಳುತ್ತದೆ.
ತಿಂದಷ್ಟು ಬೇಕೆನ್ನುವ ಗುಳಿಗ:
ಗುಳಿಗ ಭಾರಣೆ ತೆಗೆಯುವುದು ಒಂದು ರೋಚಕ ದೃಶ್ಯ. ಕೋಳಿಗಳನ್ನು ಹಸಿಹಸಿಯಾಗಿ ತಿನ್ನುವ ದೈವ ತಿಂದಷ್ಟೂ ಮತ್ತೆ ಮತ್ತೆ ಬೇಕೆಂದು ಆಗ್ರಹಿಸುತ್ತದೆ. ಆದರೆ ಕೊನೆಗೆ ಕೋಳಿ ಕೊಟ್ಟು ಕೊಟ್ಟು ಸಾಕಾಗುವ ಊರ ಹಿರಿಯರು ದೈವದಲ್ಲಿ ಕ್ಷಮೆ ಕೇಳಿ ಇಷ್ಟೇ ಇರುವುದು ಎಂದು ಕೈಚೆಲ್ಲುತ್ತಾರೆ.



