ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆಯ ಸಿದ್ಧಕಟ್ಟೆ ಗ್ರಾಮೀಣ ಪ್ರದೇಶವು ಕಳೆದ 10 ವರ್ಷಗಳಲ್ಲಿ ಜನಸಂಖ್ಯೆ ಮತ್ತು ವಾಣಿಜ್ಯ ಸಂಕೀರ್ಣ ಮತ್ತಿತರ ಅಂಗಡಿ ಮಳಿಗೆ ಸಹಿತ ವಿವಿಧ ಶಾಲಾ ಕಾಲೇಜು ನಿರ್ಮಾಣಗೊಂಡು ಪ್ರಗತಿ ಹೊಂದಿ ಪ್ರಸಕ್ತ ನಗರ ಪ್ರದೇಶವಾಗಿ ರೂಪುಗೊಂಡಿದೆ.
ಈ ಪ್ರದೇಶದಲ್ಲಿ ಪ್ರಾಥಮಿಕ ಶಾಲೆಯಿಂದ ಸರ್ಕಾರಿ ಪದವಿ ಕಾಲೇಜುತನಕ ಶಿಕ್ಷಣ ವ್ಯವಸ್ಥೆ ದೊರೆಯುತ್ತಿದೆ. ಇನ್ನೊಂದೆಡೆ ಎರಡೆರಡು ದೇವಸ್ಥಾನ, ಚರ್ಚ್ , ಆಂಗ್ಲ ಮಾಧ್ಯಮ ಶಾಲೆ, ಗೇರುಬೀಜ ಕಾರ್ಖಾನೆ ಹೀಗೆ ಬೆಳಿಗ್ಗೆ ಮತ್ತು ಸಂಜೆ ವೇಳೆ ರಸ್ತೆಯಲ್ಲಿ ವಾಹನ ಮತ್ತು ಜನದಟ್ಟಣೆ ಕಂಡು ಬರುತ್ತದೆ. ಬಂಟ್ವಾಳ ಎಪಿಎಂಸಿ ವತಿಯಿಂದ ರೂ 10ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಪ್ರತೀ ಮಂಗಳವಾರ ಸಂತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನಸಂದಣಿಯಿಂದ ಕೂಡಿರುತ್ತದೆ.
19btl-siddakatte
ಆದರೆ ಇಲ್ಲಿನ ರಸ್ತೆ ಬದಿ ಕಳೆದ ಹಲವು ವರ್ಷಗಳ ಹಿಂದೆ ತಲೆಎತ್ತಿರುವ ಹಲವಾರು ಅನಧಿಕೃತ ಗೂಡಂಗಡಿಗಳು ಇಲ್ಲಿನ ಅಭಿವೃದ್ಧಿಗೆ ತೊಡಕಾಗಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ನೂರಾರು ಮಂದಿ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರಿಗೆ ಬಸ್  ಕಾಯಲು ಒಂದು ಬದಿ ಪುಟ್ಟ ಬಸ್ ನಿಲ್ದಾಣ ಮಾತ್ರ ಇದೆ. ರಸ್ತೆಯ ಇನ್ನೊಂದು ಬದಿ ಸಾಲು ಸಾಲು ಅನಧಿಕೃತ ಗೂಡಂಗಡಿಗಳಿದ್ದು, ಬಸ್ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲದೆ ರಸ್ತೆಯಲ್ಲೇ ನಿಲ್ಲಿಸುವಂತಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಬಸ್ ಏರಲು ಮತ್ತು ಇಳಿಯುವುದಕ್ಕೂ ಗೂಡಂಗಡಿ ಮಾಡು ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ವಿದ್ಯಾರ್ಥಿಗಳು ಸ್ಥಳೀಯ ಸಂಗಬೆಟ್ಟು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಎಲ್ಲಾ ಅನಧಿಕೃತ ಗೂಡಂಗಡಿ ತೆರವಿಗೆ ನಿರ್ಣಯ ಕೈಗೊಂಡಿದ್ದರೂ ಕೆಲವೊಂದು ರಾಜಕಾರಣಿಗಳು ಪೊಲೀಸರ ತೆರವು ಕಾರ್ಯಚರಣೆಗೂ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ನಡುವೆ ಕಳೆದ ಎರಡು ವಾರಗಳ ಹಿಂದೆಯಷ್ಟೇ ಇಲ್ಲಿನ ಖಾಸಗಿ ಜಮೀನಿನಲ್ಲಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣವೊಂದು ಶುಭಾರಂಭಗೊಂಡ ಮರುದಿನ ತಡರಾತ್ರಿ ಎರಡು ಗೂಡಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಪ್ರಸಂಗವೂ ನಡೆದಿದೆ.
ಒಟ್ಟಿನಲ್ಲಿ ಬಹುತೇಕ ತಿರುವು ಮತ್ತು ಕಿರಿದಾಗಿರುವ ಬಂಟ್ವಾಳ-ಮೂಡುಬಿದ್ರೆ ರಸ್ತೆ ತ್ಷರಿತವಾಗಿ ವಿಸ್ತರಣೆಗೊಳಿಸಿ ಸರ್ಕಾರಿ ಬಸ್ ಓಡಾಟ ಆರಂಭಿಸಬೇಕು ಎಂಬ ಆಗ್ರಹವೂ ಸ್ಥಳೀಯರಿಂದ ಕೇಳಿ ಬಂದಿದೆ.
-ಮೋಹನ್ ಕೆ.ಶ್ರೀಯಾನ್

By Suddi9

Leave a Reply

Your email address will not be published. Required fields are marked *