ಮಂಗಳೂರು: ಎರಡು ವರ್ಷದ ಮಗುವನ್ನು ಅಪಹರಿಸಿ ಒಂದೂವರೆ ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಫರಿತಾ ಬೇಗಂ, ಮಣಿ ಹಾಗೂ ಲೋಗನಾಥನ್ ಎಂದು ಹೆಸರಿಸಲಾಗಿದೆ. ಪೊಲೀಸರು ಮಗುವನ್ನು ನಗರದ ಹೊರವಲಯದ ವಾಮಂಜೂರು-ಮೂಡುಶೆಡ್ಡೆಯಲ್ಲಿನ ಮಣಿ ಎಂಬಾತನ ಮನೆಯಿಂದ ಸ್ವಾಧೀನಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ತಿರುಚ್ಚಿಯ ತೆನ್ನೂರು ನಿವಾಸಿ ಆಟೋರಿಕ್ಷಾ ಚಾಲಕನ ಪತ್ನಿಯಾದ ಹಝ್ರಯ್ ಶೈನ್ಶಾ(28) ಎಂಬಾಕೆಯ ಎರಡು ವರ್ಷದ ಮಗು ಕಳೆದ ನವೆಂಬರ್ ನಾಲ್ಕರಂದು ಮನೆಯ ಹೊರಗಡೆ ಆಟವಾಡುತ್ತಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿತ್ತು. ಮಗು ಪತ್ತೆಯಾಗದಿದ್ದಾಗ ಶೈನ್ಶಾ ತಿಲ್ಲಯಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಗು ನಾಪತ್ತೆಯಾದ ಪಕ್ಕದ ಮನೆಯ ನಿವಾಸಿ ಫರಿತಾ ಬೇಗಂ ಅಲಿಯಾಸ್ ಜೆನ್ನಿಫರ್ ಕೂಡಾ ಅದೇ ದಿನದಿಂದ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತಿತ್ತು. ಫರಿತಾ ಮಾಹಿತಿಯನ್ನು ಜಾಲಾಡಿದಾಗ ಆಕೆ ತನ್ನ ಪತಿ ಗಲೀಲ್ ಅಹ್ಮದ್‍ನಿಂದ ವಿಚ್ಛೇದನ ಪಡೆದುಕೊಂಡಿದ್ದು, ದೆಹಲಿ ನಿವಾಸಿ ಸತಿ ಅಲಿಯಾಸ್ ವಿನೋದ್ ಎಂಬಾತನನ್ನು ಮದುವೆ ಮಾಡಿಕೊಂಡಿದ್ದಳು. ಈ ಮಧ್ಯೆ ಪಲಕ್ಕರಾಯಿ ನಿವಾಸಿ ಪಲಕ್ಕರಾಯಿ ನಿವಾಸಿ ಲೋಗನಾಥನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದು ತಿಳಿದುಬಂದಿತ್ತು.
ಎರಡನೇ ಪತಿ ವಿನೋದ್ ಸೋದರ ಮಣಿ ಎಂಬಾತ ಸಿನಿಮಾ, ಧಾರವಾಹಿಗಳಿಗೆ ಮಕ್ಕಳನ್ನು ಒದಗಿಸುವ ಕೆಲಸ ಮಾಡುತ್ತಿದ್ದ. ಅದರಂತೆ ಮಾಹಿತಿ ಪಡೆದುಕೊಂಡ ಪೊಲೀಸರು ಮಂಗಳೂರು ಪೊಲೀಸರನ್ನು ಸಂಪರ್ಕಿಸಿ ಸಹಾಯ ಕೇಳಿಕೊಂಡಿದ್ದರು. ಮಣಿ ವಾಮಂಜೂರು-ಮೂಡುಶೆಡ್ಡೆಯಲ್ಲಿರುವ ಮಾಹಿತಿ ಪಡೆದುಕೊಂಡ ಪೊಲೀಸರು ಮಗುವಿನ ಸಮೇತ ಬಂಧಿಸಿದ್ದಾರೆ. ಮಗುವನ್ನು ಫರಿತಾ ಬೇಗಂ ಒಂದೂವರೆ ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದನ್ನು ಆಕೆ ಒಪ್ಪಿಕೊಂಡಿದ್ದು, ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

