ಬಂಟ್ವಾಳ: ಬಿ.ಸಿ.ರೋಡಿನ ಚರಂಡಿ ನೀರು ಹರಿದು ಹೋಗಲು ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ಹೊಂಡ ಕೊರೆದು ಸಿಮೆಂಟ್ ಕೊಳವೆ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡು ಅರೆಬರೆ ಕಾಮಗಾರಿ ನಿರ್ವಹಿಸಿದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಕೆಲವು ಸಮಯದ ಹಿಂದೆ ಕಾಮಾಗಾರಿ ಆರಂಭಮಾಡಿದ್ದು ಜೆಸಿಬಿಯ ಮೂಲಕ ರಸ್ತೆ ಮಧ್ಯೆ ಹೊಂಡ ತೆಗೆಯಲಾಗಿತ್ತು. ಆ ಬಳಿಕ ಸಿಮೆಂಟ್ ಕೊಳವೆಯನ್ನು ಹೊಂಡದಲ್ಲಿ ಜೋಡಿಸಲಾಗಿದ್ದರೂ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಕೆಲಸವನ್ನು ಅರ್ಧದಲ್ಲೆ ಬಿಟ್ಟು ಕಣ್ಮರೆಯಾಗಿದ್ದಾರೆ. ಇದರಿಂದ ಕಾಮಗಾರಿ ಅಪೂರ್ಣಗೊಂಡಿದ್ದು ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ.
ಸೋಮವಾರ ಸಂಜೆ ಇದೇ ಸ್ಥಳದಲ್ಲಿ ಲಾರಿ ಹಾಗೂ ಕಾರು ಪರಸ್ಪರ ಡಿಕ್ಕಿಯಾಗಿ ಕೆಲ ಹೊತ್ತುಗಳ ಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಯಿತು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು.
ಸಂಜೆಯ ವೇಳೆಗೆ ಕೆಲಸ ಮುಗಿಸಿ ಮನೆಗೆ ತೆರಳುವ ಮಂದಿ ಟ್ರಾಫಿಕ್ ಜಾಂನಲ್ಲಿ ಸಿಲುಕ ಬೇಕಾಯಿತು. ಇದೇ ರೀತಿ ರಾ.ಹೆದ್ದಾರಿ ಮಧ್ಯೆ ತೆಗೆದ ಹೊಂಡವನ್ನು ಮುಚ್ಚದೇ ಹೋದಲ್ಲಿ ಮಳೆ ನೀರು ತುಂಬಿ ಅಪಾಯಕಾರಿಯಾಗಿ ಪರಿಣಮಿಸ ಬಹುದು ಅಲ್ಲದೆ ವಾಹನಗಳು ಹೊಂಡಕ್ಕೆ ಬೀಳ ಬಹುದು ಎನ್ನುವ ಆತಂಕವನ್ನು ಇಲ್ಲಿನ ನಾಗರಿಕರು ವ್ಯಕ್ತಪಡಿಸಿದ್ದಾರೆ.

