ಬಂಟ್ವಾಳ: ಅಧಿಕ ಸದಸ್ಯ ಬಲ ಹೊಂದಿರುವ ಬಿಜೆಪಿ ನಿರೀಕ್ಷೆಯಂತೆ ತಾಲೂಕು ಪಂಚಾಯತ್ನ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಯಶವಂತ ದೇರಾಜೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಪಕ್ಷದ ಮುಖಂಡರ ನಿರ್ದಾರ ಕೆಲ ಬಿಜೆಪಿ ಸದಸ್ಯರೊಳಗೆ ಅಸಮಾಧಾನದ ಬಾಂಬ್ ಸ್ಪೋಟಗೊಳ್ಳಲು ಕಾರಣವಾಗಿದೆ.
ಸೋಮವಾರ ನಡೆದ ನೂತನ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಸಂಭ್ರಮ ನೀಡಿದರೆ ಕೆಲ ಬಿಜೆಪಿ ಬೆಂಬಲಿತ ಸದಸ್ಯರು ಒಳಗೊಳಗೆ ಮಮ್ಮಲ ಮರುಗುವಂತೆ ಮಾಡಿದೆ. ಅಧ್ಯಕ್ಷ ಸ್ಥಾನ ನೀಡುತ್ತೇವೆಂದು ಕೆಲ ಸದಸ್ಯರನ್ನು ನಂಬಿಸಿ ಕೊನೆ ಗಳಿಗೆಯಲ್ಲಿ ನಿರಾಕರಿಸಿದ್ದೇ ಸದಸ್ಯರ ಅಸಮಾಧಾನಕ್ಕೆ ಕಾರಣ. ಅಧ್ಯಕ್ಷ ಸ್ಥಾನದ ಮೇಲೆ ಅತೀ ನಿರೀಕ್ಷೆ ಇಟ್ಟು ಕೊಂಡಿದ್ದ ಸದಸ್ಯರೊರ್ವರು ಬಹಿರಂಗವಾಗಿಯೇ ತಮ್ಮ ಬೇಸರವನ್ನು ಪಕ್ಷದ ಮುಖಂಡರ ಹಾಗೂ ಮಾಧ್ಯಮದ ಮುಂದೆ ತೋರ್ಪಡಿಸಿದ್ದಾರೆ.
ರಾಯಿ ತಾ.ಪಂ.ಕ್ಷೇತ್ರದ ಸದಸ್ಯ ವಸಂತ ಅಣ್ಣಳಿಕೆ ರಾಜಿನಾಮೆ ಪತ್ರವನ್ನು ಕೈಯಲ್ಲಿಡಿದುಕೊಂಡೇ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆಯಲ್ಲಿ ಯಶವಂತ ದೇರಾಜೆ ಹಾಗೂ ವಿಲಾಸಿನಿ ಪರವಾಗಿ ಕೈ ಎತ್ತಿ ಮತ ಚಲಾಯಿಸಿದ್ದ ವಸಂತ ಅಣ್ಣಳಿಕೆ ಅಭಿನಂದನ ಕಾರ್ಯಕ್ರಮದ ವೇಳೆ ಸಭಾಂಗಣದಿಂದ ಹೊರ ತೆರಳಿದ್ದರು. ಅಧ್ಯಕ್ಷಗಾದಿಗೆ ಆಕಾಂಕ್ಷಿಯಾಗಿದ್ದ ವಸಂತ ಅಣ್ಣಳಿಕೆಯ ಆಸೆಗೆ ಪಕ್ಷದ ಮುಖಂಡರು ಬೆಣ್ಣೆ ಸವರಿದ್ದರು. ಅಧ್ಯಕ್ಷ ಸ್ಥಾನವನ್ನು ನಿಮಗೆ ನೀಡುತ್ತೇವೆ ಎಂದು ನಿನ್ನೆಯವರೆಗೂ ಹೇಳಿಕೊಂಡಿದ್ದ ಪಕ್ಷದ ನಾಯಕರು ಇವತ್ತು ವಂಚಿಸಿದ್ದಾರೆ ಎಂದು ತನ್ನ ಅಸಮಾಧಾನವನ್ನು ಬಹಿರಂಗವಾಗಿಯೇ ತೋರ್ಪಡಿಸಿಕೊಂಡರು. ಕೈಯಲ್ಲಿ ರಾಜೀನಾಮೆ ಪ್ರತ್ರವನ್ನು ಹಿಡುಕೊಂಡಿದ್ದ ಸದಸ್ಯ ವಸಂತ ಅಣ್ಣಳಿಕೆಯನ್ನು ಪಕ್ಷದ ಮುಖಂಡರಾದ ನಾಗರಾಜ ಶೆಟ್ಟಿ, ಸಂತೋಷ್ ಕುಮಾರ್ ರೈ, ಚೆನ್ನಪ್ಪ ಕೋಟ್ಯಾನ್, ಜಿ.ಆನಂದ, ರಾಮದಾಸ ಬಂಟ್ವಾಳ ಮೊದಲಾದವರು ಸಮಧಾನ ಪಡಿಸಲು ಯತ್ನಿಸಿದರೂ ಅವರ ಆಕ್ರೋಶ ತಣ್ಣಗಾಗಿರಲಿಲ್ಲ.
