ಅಮೃತ್‌ಸರ: ಅಲ್ಲಿ ಶ್ರದ್ಧಾಂಜಲಿ ಸಭೆ ನಡೆದಿತ್ತು ಆದರೆ, ಅಲ್ಲಿ ನಡೆದಿದ್ದೇ ಬೇರೆ, ಸಿಖ್ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದರು ಕೊನೆಗೆ ಆಯುಧಗಳನ್ನು ಎತ್ತಿ ಸಮರಕ್ಕೆ ಮುಂದಾದ ಘಟನೆ ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣಮಂದಿರದಲ್ಲಿ ಶುಕ್ರವಾರ ನಡೆದಿದೆ. ಅಪರೇಷನ್ ಬ್ಲೂಸ್ಟಾರ್ ನಡೆದು ಇಂದಿಗೆ 30 ತುಂಬಿದ ಹಿನ್ನಲೆಯಲ್ಲಿ ವರ್ಷಾಚರಣೆ ನಡೆಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿತ್ತು.
ಎಂದಿನಂತೆ ಭಜನೆ, ಗ್ರಂಥ್ ಸಾಹಿಬ್ ಪಠಣ ಮುಗಿದಿತ್ತು. ಸಭೆಯಲ್ಲಿ ಸೇರಿದವರಲ್ಲಿ ಹಲವರು 1984ರ ಸಿಖ್ ಹತ್ಯಾಕಾಂಡವನ್ನು ಖಂಡಿಸಿ ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ವಿಶ್ವಸಂಸ್ಥೆಗೆ ಈ ಬಗ್ಗೆ ಅಹವಾಲು ಸಲ್ಲಿಸಿ ನ್ಯಾಯ ಪಡೆಯುವ ಅವಶ್ಯಕತೆ ಎಂದು ಹೇಳಿದ್ದಾರೆ. ಅದರೆ, ಇದಕ್ಕೆ ಅಕಾಲಿದಳದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ದೇವಾಲಯದ ಆವರಣದಲ್ಲೇ ಅಕಾಲಿದಳ ಮತ್ತು ಎಸ್‌ಜಿಪಿಸಿ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ತಲವಾರು, ಈಟಿ, ದೊಣ್ಣೆ, ಕತ್ತಿಗಳಿಂದ ಬಡಿದಾಡಿದ್ದಾರೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
