ಹೊಸದಿಲ್ಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಮುಖ ರಾಷ್ಟ್ರೀಯ ಪಕ್ಷಗಳ 2016–17ನೇ ಸಾಲಿನ ವರಮಾನ ವರದಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷ ಎಂದು ತಿಳಿಸಿದೆ.
ಪಕ್ಷಗಳು ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರದ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿದ್ದರೆ ಸಿಪಿಐ ಅತ್ಯಂತ ಕಡಿಮೆ ವರಮಾನ ಪಡೆದ ಪಕ್ಷವಾಗಿದೆ.
2016–17ನೇ ಸಾಲಿನ ಬಿಜೆಪಿ ವರಮಾನ 1,034.27 ಕೋಟಿಯಾಗಿದೆ. ಜತೆಗೆ 2016-17ರಲ್ಲಿ 710.057 ಕೋಟಿ ರೂ. ಖರ್ಚು ಮಾಡಿರುವುದಾಗಿ ಬಿಜೆಪಿ ಘೋಷಿಸಿಕೊಂಡಿದೆ.
ಭಾರತೀಯ ಜನತಾ ಪಕ್ಷದ ಚುನಾವಣಾ ಯಶಸ್ಸಿಗೆ ಅನುಗುಣವಾಗಿ ಅದರ ಆದಾಯ 2015-16 ಮತ್ತು 2016-17ರಲ್ಲಿ ಶೇ.81.18ರ ಏರಿಕೆಯನ್ನು ಕಂಡಿದೆ.
ಕಾಂಗ್ರೆಸ್ ಪಕ್ಷದ ಆದಾಯದಲ್ಲಿ ಶೇ.14ರ ಕುಸಿತ ದಾಖಲಾಗಿದ್ದು, ಈ ಅವಧಿಯಲ್ಲಿ ಕಾಂಗ್ರೆಸ್ ಮಾಡಿರುವ ಖರ್ಚು 321.66 ಕೋಟಿ ರೂ. ಆದರೆ ಈ ಮೊತ್ತವು, ಅದರ ಈ ಅವಧಿಯ ಆದಾಯಕ್ಕಿಂತ 96.30 ಕೋಟಿ ರೂ. ಹೆಚ್ಚು ಎಂಬುದು ಗೊತ್ತಾಗಿದೆ. ಇನ್ನು ಸಿಪಿಐನ ವರಮಾನ 2.08 ಕೋಟಿ ರೂ.
ಒಟ್ಟು 7 ರಾಷ್ಟ್ರೀಯ ರಾಜಕೀಯ ಪಕ್ಷಗಳ ಒಟ್ಟು ಆದಾಯ 1,559.17 ಕೋಟಿ ರೂ. ಖರ್ಚು 1,288.26 ಕೋಟಿ ರೂ. ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.

