ಟೆಕ್-ಎಕ್ಸ್‍ಪೋ -2017 ವಿದ್ಯಾರ್ಥಿಗಳ ಆವಿಷ್ಕಾರದ ತಾಂತ್ರಿಕ ವಸ್ತುಗಳ ಪ್ರದರ್ಶನ
ಉಳ್ಳಾಲ; ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಜೀವನಕ್ಕೆ ಪ್ರೋತ್ಸಾಹಿಸಲು ಸಹಕಾರಿಯಾಗುವ ತಾಂತ್ರಿಕ ಕಲೆಗಳ ತರಬೇತಿಗೆ ಮುಂದಾಗಿರುವ ಮಿಟ್ಸ್ ಸಂಸ್ಥೆ ಆಡಳಿತ ಮಂಡಳಿ ಕಾರ್ಯವೈಖರಿ ಶ್ಲಾಘನೀಯ ಎಂದು ಆಹಾರ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಸೈನ್ಸ್ (ಮಿಟ್ಸ್) ಇದರ ವತಿಯಿಂದ ತೊಕ್ಕೊಟ್ಟು ಟಿ.ಸಿ.ರೋಡಿನ ಮಿಟ್ಸ್ ಕ್ಯಾಂಪಸ್ಸಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಟೆಕ್-ಎಕ್ಸ್‍ಪೋ -2017 ವಿದ್ಯಾರ್ಥಿಗಳು ಆವಿಷ್ಕಾರದ ತಾಂತ್ರಿಕ ವಸ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ತರಬೇತಿ ಪಡೆದವರಿಗೆ ಉತ್ತಮ ಬೇಡಿಕೆಯಿದೆ. ಈ ಮೂಲಕ ಉತ್ತಮ ಸ್ಥಾನವನ್ನು ವಿದ್ಯಾರ್ಥಿಗಳು ಪಡೆಯಬಹುದು. ತರಬೇತಿ ಬಳಿಕ ಉತ್ತಮ ಸ್ಥಾನ ಪಡೆದುಕೊಂಡವರು ವಿಚಾರಗಳನ್ನು ಸಮಾಜಕ್ಕೆ ತರುವ ಪ್ರಯತ್ನ ಮಾಡಬೇಕಿದೆ. ಇದರಿಂದ ಕೌಶಲ್ಯ ಅಭಿವೃದ್ಧಿ ಬೆಳೆಸುವ ಮೂಲಕ ಪ್ರತಿಭೆಗಳನ್ನು ಹೊರಜಗತ್ತಿಗೆ ತರುವ ಕಾರ್ಯ ಆಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಟ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಂಶುಪಾಲ ಅಸ್ಖಾನ್ ಶೇಖ್ ಮಾತನಾಡಿ ಎಸ್ ಎಸ್ ಎಲ್ ಸಿ ನಂತರ ವಿದ್ಯಾರ್ಥಿಗಳಿಗೆ ಕೌಶಲ್ಯ ವೃದ್ಧಿ ಬೆಳೆಸುವಲ್ಲಿ ಸಂಸ್ಥೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ಭವಿಷ್ಯದಲ್ಲಿ ಉತ್ತಮ ಕರ್ತವ್ಯ ಪಡೆಯಲು ಸಾಧ್ಯ ಎಂದರು.
ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಮಾತನಾಡಿ ಉತ್ತಮ ಮೂಲಭೂತ ಸೌಕರ್ಯಗಳ ವ್ಯವಸ್ಥೆಯೊಂದಿಗೆ ಸಿವಿಲ್ ಹಾಗೂ ಮೆಕಾನಿಕಲ್ ತರಬೇತಿಯನ್ನು ವ್ಯವಸ್ಥಿತವಾಗಿ ನೀಡಲು ಸಂಸ್ಥೆ ಮುಂದಾಗಿದ್ದು, ಅಪರೂಪದ ತರಬೇತಿ ಜತೆಗೆ ಆಡಳಿತ ಸಂಸ್ಥೆಯ ಕಾರ್ಯವೈಖರಿಯಿಂದ ಸಂಸ್ಥೆ ಯಶಸ್ಸು ಸಾಧ್ಯ ಎಂದರು.
ಉಳ್ಳಾಲ ನಗರಸಭೆ ಸದಸ್ಯರಾದ ಫಾರುಕ್ ಉಳ್ಳಾಲ್ ಮಾತನಾಡಿ ವಿದ್ಯಾರ್ಥಿಗೆ ಆತ್ಮವಿಶ್ವಾಸ, ಆತ್ಮಾಭಿಮಾನ ಹಾಗೂ ಎಲ್ಲರೂ ಗೌರವಿಸುವ ಗುಣಗಳ ಜತೆಗೆ ತರಬೇತಿ ನೀಡುವುದರ ಮೂಲಕ ಆತ ಸಮಾಜದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.
ಈ ಸಂದರ್ಭ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ , ಸಂಸ್ಥೆಯ ಪ್ರಬಂಧಕ ಮೈಕಲ್.ಯಸ್. ಲಿಂದ್ರೋ, ನಗರಸಭೆ ಸದಸ್ಯ ಫಾರುಕ್ ಯು.ಹೆಚ್, ಹಳೇಕೋಟೆ ಸೈಯ್ಯದ್ ಮದನಿ ಉರ್ದು ಶಾಲೆಯ ಮುಖ್ಯೊಪಾಧ್ಯಾಯ ಕೆ.ಎಂ.ಕೆ ಮಂಜನಾಡಿ ಉಪಸ್ಥಿತರಿದ್ದರು.
ಸಂಸ್ಥೆ ಸಿಬ್ಬಂದಿಗಳಾದ ಪ್ರೀತಿ ಮತ್ತು ಕಾವ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ಮೆರೈನ್ ಕಾಲೇಜಿನ ಉಪನ್ಯಾಸಕ ಸಂದೇಶ್ ವಂದಿಸಿದರು. ಉಳ್ಳಾಲ ಸುತ್ತಮುತ್ತಲಿನ 10ಕ್ಕೂ ಅಧಿಕ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಹಳೇಕೋಟೆ ಅನುದಾನಿತ ಸೈಯ್ಯದ್ ಮದನಿ ಉರ್ದು ಶಾಲೆ ವಿದ್ಯಾರ್ಥಿಗಳಿಗಾಗಿ ನೂತನ ಬಸ್ ಖರೀದಿಗಾಗಿ ಸಹಾಯಧನವನ್ನು ಸಂಸ್ಥೆ ಅಧ್ಯಕ್ಷ ಅಸ್ಖಾನ್ ಇವರು ಶಾಲೆ ಮುಖ್ಯೋಪಾಧ್ಯಾಯ ಕೆ.ಎಂ.ಕೆ ಮಂಜನಾಡಿ ಇವರಿಗೆ ಹಸ್ತಾಂತರಿಸಿದರು.