ಮೂಡುಬಿದಿರೆ: ಕರ್ನಾಟಕ ಜಗತ್ತಿಗೆ ನೀಡಿದ ಅತ್ಯಪೂರ್ವ ವನ್ಯಜೀವಿ ಛಾಯಾಚಿತ್ರಗ್ರಾಹಕ ತಂಜಾವೂರು ನಟೇಶಾಚಾರ್ಯ ಅಯ್ಯಂ ಪೆರುಮಾಳ್ ಅವರಿಗೆ ಈ ಬಾರಿಯ ಅಳ್ವಾಸ್ ಛಾಯಾಚಿತ್ರ ನುಡಿಸಿರಿ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಟಿ.ಎನ್.ಎ.ಪೆರುಮಾಳ್ ಅವರಿಗೆ ಪ್ರಸಕ್ತ ವರ್ಷದ ಛಾಯಾಚಿತ್ರ ನುಡಿಸಿರಿ ಪ್ರಶಸ್ತಿ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷರಾದ ಡಾ. ಮೋಹನ್ ಆಳ್ವ ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ದೇಶ-ದೇಶಗಳ ವನ್ಯಲೋಕವನ್ನು ತಮ್ಮ ಕ್ಯಾಮರಾ ಕಣ್ಣಿನ ಮೂಲಕ ಸೆರೆ ಹಿಡಿಯುತ್ತಿರುವ 82ರ ಹರಯದ ಪೆರುಮಾಳ್ ಅವರದ್ದು ನಿತ್ಯ ನಿರಂತರ ಅಧ್ಯಯನಶೀಲ ಛಾಯಾಚಿತ್ರಗ್ರಾಹಕರಾಗಿದ್ದು ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನ.13ರಂದು ಪ್ರದಾನ:
ನ.13ರಂದು ಜರಗಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಆಳ್ವಾಸ್ ಛಾಯಾಚಿತ್ರ ಸಿರಿ ಸ್ಪರ್ಧೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದೇಶದ ವಿವಿಧ ಮೂಲೆಗಳಿಂದ ಇಂದಿನ ವರಗೆ ಸುಮಾರು 1241 ಛಾಯಾಚಿತ್ರಗಳು ಬಂದಿವೆ. ನ. 6 ಕೊನೆಯ ದಿನಾಂಕವಾಗಿದ್ದು ಇನ್ನು ಕನಿಷ್ಠ 500 ಚಿತ್ರಗಳ ನಿರೀಕ್ಷೆಯಲ್ಲಿದ್ದೇವೆ.
ನ. 7ರಂದು ತೀರ್ಪುಗಾರಿಕೆ ನಡೆಯಲಿದೆ. ಆಳ್ವಾಸ್ ನುಡಿಸಿರಿ ಸಂದರ್ಭದಲ್ಲಿ ಬಹುಮಾನಿತ ಕೃತಿಗಳೊಂದಿಗೆ ಆಯ್ದ 60 ಚಿತ್ರಗಳ ಪ್ರದರ್ಶನವೂ ಜರಗಲಿದೆ ಎಂದು ಆಳ್ವಾಸ್ ಛಾಯಾಚಿತ್ರ ಸಿರಿಯ ಸಂಘಟನಾ ಕಾರ್ಯದರ್ಶಿ ಆಸ್ಟ್ರೋ ಮೋಹನ್ ಮಾಹಿತಿ ನೀಡಿದರು.

