ಮೂಡುಬಿದಿರೆ: ಕಲ್ಲಬೆಟ್ಟು ಅಗ್ನಿಶಾಮಕ ದಳ ಕರ್ತವ್ಯ ನಿರ್ವಹಿಸುತ್ತಿದ್ದ ಹಳೆ ಕಟ್ಟಡವನ್ನು ಮೂಡುಬಿದಿರೆ ಪುಸರಭೆಯು ದುರುಪಯೋಗಪಡಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೃಷ್ಣರಾಜ ಹೆಗ್ಡೆ ಆರೋಪಿಸಿದ್ದಾರೆ.
ಮೂಡುಬಿದಿರೆ ಹೋಬಳಿಯ ಕರಿಂಜೆ, ಕಲ್ಲಬೆಟ್ಟು ಮತ್ತು ಮಾರೂರು ಗ್ರಾಮಗಳ ಅನುಕೂಲಕ್ಕಾಗಿ ಗ್ರಾಮೀಣ ಅಭಿವೃದ್ಧಿ ಇಲಾಖೆ ಈ ಹಿಂದೆ ನಿರ್ಮಿಸಿರುವ ಕರಿಂಜೆ ಗ್ರಾಮ ಪಂಚಾಯಿತಿ ಕಟ್ಟಡವಾಗಿ ಪರಿವರ್ತಿಲಾಯಿತು. ಬಳಿಕ ಕರಿಂಜೆ, ಕಲ್ಲಬೆಟ್ಟು, ಮಾರೂರು ಗ್ರಾಮಗಳನ್ನು ಪುರಸಭಾ ವ್ಯಾಪ್ತಿಗೆ ಸೇರಿಸಲಾಯಿತು. ಮೂಡುಬಿದಿರೆಯಲ್ಲಿ ಅಗ್ನಿಶಾಮಕ ಠಾಣೆ ಅಸ್ವಿತ್ವಕ್ಕೆ ಬಂದಾಗ ಕಟ್ಟಡ ಕೊರತೆಯಿದ್ದು, ಕಟ್ಟಡದಲ್ಲಿ ಅಗ್ನಿಶಾಮಕ ದಳ ಸೇವೆಗಾಗಿ ವಿನಿಯೋಗಿಸಲಾಗಿತ್ತು.
18 ವರ್ಷಗಳ ಕಾಲ ಅಗ್ನಿಶಾಮಕ ಠಾಣೆ ಇಲ್ಲಿ ಕಾರ್ಯಾಚರಿಸುತ್ತಿದ್ದು, ಎರಡು ತಿಂಗಳ ಹಿಂದೆ ತನ್ನದೇ ಸ್ವಂತ ಜಾಗದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಪುರಸಭೆಯವರು ಈ ಕಟ್ಟಡವನ್ನು ಸರ್ಕಾರ ಯಾವುದೇ ಇಲಾಖೆಯ ಸಿಬ್ಬಂದಿಗಳಿಗೆ ನೀಡದೆ, ಖಾಸಗಿ ವ್ತಕ್ತಿಗಳ ಅನುಕೂಲಕ್ಕಾಗಿ ನೀಡಿ ಇಲಾಖೆಯ ಕಾನೂನು ನಿಯಮಗಳನ್ನು ಉಲ್ಲಂಘಿಸಿರುತ್ತದೆ ಎಂದು ಆರೋಪಿಸಿದ್ದಾರೆ. ಸದ್ರಿ ಕಟ್ಟಡವನ್ನು ಕೃಷಿ, ತೋಟಗಾರಿಕೆ, ಪುರಸಭಾ ಆಡಳಿತಕ್ಕಾಗಿ ನೀಡಿ, ಸಾರ್ವಜನಿಕರ ಅನುಕೂಲಕ್ಕಾಗಿ ವಿನಿಯೋಗಿಸಲು ಅವಕಾಶ ಕಲ್ಪಿಸಿಕೊಡಬಹುದು ಎಂದು ಕೃಷ್ಣರಾಜ ಹೆಗ್ಡೆ ಸಲಹೆ ನೀಡಿದ್ದಾರೆ.

