ಸಿಂಗಾಪುರ: ಸಣ್ಣಪುಟ್ಟ ದೇಶಗಳನ್ನು ದಬ್ಬಾಳಿಕೆ ನಡೆಸುವುದು ಚೀನಾಕ್ಕೆ ಅಭ್ಯಾಸವಾಗಿ ಹೋಗಿದೆ. ಮುಂದೆ ಈ ರೀತಿ ಮಾಡಿದರೆ ಜೋಕೆ, ಅಂಥ ಕೆಟ್ಟಚಟವನ್ನು ನಾವೆಂದೂ ಕ್ಷಮಿಸುವುದಿಲ್ಲ ಎಂದು ಅಮೇರಿಕಾ ಚೀನಾಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನ ಮೆರೆಯಲು ಚೀನಾ ದೇಶ ಇತರ ಸಣ್ಣಪುಟ್ಟ ದೇಶಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಅಂತಾರಾಷ್ಟ್ರೀಯ ವ್ಯವಸ್ಥೆಯ ಮೂಲತತ್ವಗಳನ್ನೇ ಉಲ್ಲಂಘಿಸುವ ಸನ್ನಿವೇಶ ಬಂದರೆ ತಾವು ಕಣ್ಣುಮುಚ್ಚಿಕೊಂಡು ಕೂರುವುದಿಲ್ಲ , ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಅಭದ್ರತೆಯ ವಾತಾವರಣ ನಿರ್ಮಾಣವಾಗಿ ಸೂಕ್ಷ್ಮ ಪರಿಸ್ಥಿತಿ ಉದ್ಭವಿಸಿದೆ ಎಂದು ಅಮೇರಿಕಾ ಹೇಳಿದೆ.
ಇತ್ತೀಚೆಗೆ ಜಪಾನ್ ದೇಶ ಕೂಡ ಚೀನಾದ ವಸಾಹತು ನೀತಿ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಈಗ ಅಮೆರಿಕದ ಗಮನ ಕೂಡ ಇತ್ತ ಹರಿದಿದೆ. “ತನ್ನ ಸರಹದ್ದನ್ನ ಸಮರ್ಥಿಸಿಕೊಳ್ಳಲು ಯಾವುದೇ ದೇಶವಾಗಲೀ ಬೆದರಿಕೆಯ ತಂತ್ರ ಅನುಸರಿಸುವುದನ್ನ ನಾವು ವಿರೋಧಿಸುತ್ತೇವೆ” ಎಂದು ಚೀನಾ ದೇಶವನ್ನ ಅಮೆರಿಕ ಎಚ್ಚರಿಸಿದೆ. ಚೀನಾದ ಉತ್ತರವೇನು…? ದಕ್ಷಿಣ ಚೀನಾ ಸಾಗದಲ್ಲಿ ನಾವು ಯಾರ ಮೇಲೂ ಹರಿಹಾಯ್ದು ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಚೀನಾ ತಿರುಗೇಟು ನೀಡಿದೆ. ಏನಿದು ತಕರಾರು..?
ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಅಪರಿಮಿತವಾದ ತೈಲ ಮತ್ತು ಅನಿಲ ಸಂಪತ್ತಿದೆ. ಇಡೀ ಪ್ರದೇಶ ತನಗೇ ಸೇರಿದೆ ಎಂದು ಚೀನಾ ದೇಶ ಸಾಧಿಸಿಕೊಂಡು ಬರುತ್ತಿದೆ. ಆದರೆ, ಇದೇ ಸಾಗರದಲ್ಲಿರುವ ತೈವಾನ್, ಬ್ರೂನೆ, ವಿಯೆಟ್ನಾಂ, ಫಿಲಿಪ್ಪೈನ್ಸ್ ಮತ್ತು ಮಲೇಶ್ಯಾ ದೇಶಗಳೂ ಕೂಡ ತಮ್ಮ ಪಾಲನ್ನ ಕೇಳುತ್ತಾ ಬಂದಿವೆ. ಚೀನಾ ಮಾತ್ರ ಎಲ್ಲರನ್ನೂ ಹೆದರಿಸಿಕೊಂಡು ಹಕ್ಕು ಚಲಾಯಿಸುತ್ತಿದೆ. ಕೆಲ ದಿನಗಳ ಹಿಂದೆ ವಿಯೆಟ್ನಾಂಗೆ ಸೇರಿದ ಜಲಪ್ರದೇಶದಲ್ಲಿ ಚೀನಾ ದೇಶ ಆಯಿಲ್ ರಿಗ್ ಯಂತ್ರವನ್ನ ತಂದುಬಿಟ್ಟಿದೆ. ಹಾಗೆಯೇ, ಫಿಲಿಪ್ಪೈನ್ಸ್ ದೇಶಕ್ಕೆ ಸೇರಿದ ಪ್ರದೇಶದಲ್ಲೂ ಚೀನಾ ಹಸ್ತಕ್ಷೇಪ ಮಾಡಿದೆ ಎಂಬ ಸುದ್ದಿ ಬರುತ್ತಿದೆ.
