ಮೂಡುಬಿದಿರೆ : ಕೊರಿಯಾದ ವಾಂಗ್ಜುನಲ್ಲಿ ಜುಲೈ 3 ರಿಂದ 14ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ವಿವಿಗಳ ಕ್ರೀಡಾಕೂಟಕ್ಕೆ ಆಳ್ವಾಸ್ ಸಂಸ್ಥೆಯ ಪ್ರಾಯೋಜಕತ್ವದ ಕ್ರೀಡಾಪಟು ಇಂದ್ರಜಿತ್ ಸಿಂಗ್ ಮತ್ತು ಆಳ್ವಾಸ್ನ ಕ್ರೀಡಾ ಪಟು ಪ್ರಿಯಾಂಕ ಎಸ್. ಕಲಗಿ ಆಯ್ಕೆಯಾಗುವ ಮೂಲಕ 37 ವರ್ಷಗಳ ನಂತರ ಮಂಗಳೂರು ವಿವಿಯನ್ನು ಪ್ರತಿನಿಧಿಸುತ್ತಿರುವ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಅವರು ಸೋಮವಾರ ಆಳ್ವಾಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಈಗಾಗಲೇ ಕ್ರೀಡೆಯಲ್ಲಿ ಅನೇಕ ದಾಖಲೆಯನ್ನು ಮಾಡಿದ್ದು, ಅಖಿಲ ಭಾರತದಲ್ಲಿ ಸುಮಾರು 250 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. 75ನೇ ಅಖಿಲ ಭಾರತ ಅಂತರ್ ವಿ.ವಿ ಕ್ರೀಡಾಕೂಟದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಕಳೆದ ಮೇ 2 ಹಾಗೂ 27ರಂದು ಪಟಿಯಾಲದ ಪಂಜಾಬಿ ವಿ.ವಿ.ಯಲ್ಲಿ ಆಯ್ಕೆ ನಡೆಸಲಾಗಿತ್ತು. ಆಯ್ಕೆಯಾದ 2 ವಿದ್ಯಾರ್ಥಿಗಳು ಪ್ರಿಯಾಂಕ,ಎಸ್.ಕಳಗಿ ಮತ್ತು ಇಂದ್ರಜಿತ್ ಸಿಂಗ್ 100ಮೀ. ಅಥ್ಲೆಟಿಕ್ನಲ್ಲಿ ಚಿನ್ನದ ಪದಕವನ್ನು ಏಷ್ಯನ್ನಲ್ಲಿ ದಾಖಲಿಸಿದ್ದಾರೆ.
ಇಂದ್ರಜಿತ್ ಸಿಂಗ್ ಆಳ್ವಾಸ್ ಪ್ರಯೋಜಕತ್ವ ಕ್ರೀಡಾ ವಿದ್ಯಾರ್ಥಿಯಾಗಿದ್ದು ಓಪನ್ ಮೀಟ್ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್, ಒಲಿಂಪಿಕ್ ಅರ್ಹತೆಯನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಖರ್ಚು ವೆಚ್ಚ ವಸತಿ, ಊಟೋಪಚಾರ ವ್ಯವಸ್ಥೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.


