ಬಂಟ್ವಾಳ; ನೈತಿಕ ಪೊಲೀಸ್ ಗಿರಿಗೆ ಪೊಲೀಸ್ ವೈಫಲ್ಯ ಕಾರಣವಲ್ಲ, ಇದು ಸಮಾಜದ ವೈಫಲ್ಯ, ಐಕ್ಯತೆಯ ವೈಫಲ್ಯ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮ್ರಿತ್ಪಾಲ್ ಹೇಳಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ನೂತನ ಸಂದರ್ಶಕರ ಕೊಠಡಿಯನ್ನು ಉದ್ಘಾಟಿಸಿದ ಅವರು, ಬಳಿಕ ನಡೆದ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿವಿಧ ಧರ್ಮಗಳ ಜನರು ಪರಸ್ಪರ ಸಮನ್ವಯತೆಯಿಂದ ಬದುಕುವಲ್ಲಿ ವಿಫಲರಾಗಿದ್ದೇವೆ, ಶಾಶ್ವತ ವೈಷಮ್ಯವನ್ನು ಬೆಳೆಸಿಕೊಳ್ಳುತ್ತಿದ್ದೇವೆ ಇದರು ದುರದೃಷ್ಟಕರ ಎಂದ ಅವರು, ಇದಕ್ಕೆ ಸಮಾಜದ ಮುಖಂಡರೇ ಹೊಣೆಗಾರರು ಎಂದರು. ಸಂವಿಧಾನ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ನೀಡಿದೆ, ಆದರೆ ಅದನ್ನು ಇತರ ಧರ್ಮವನ್ನು ಅವಮಾನಿಸಲು ಬಳಸುವಂತಾದ್ದು ಹೀನ ಕೃತ್ಯ. ಕಳೆದ ಒಂದು ವರ್ಷದಿಂದೀಚೆಗೆ ನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದ ಅವರು, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕಾನೂನು ಬಾಹಿರ ಕೃತ್ಯ ನಡೆಸುವವರನ್ನು ಬಳ್ಳಾರಿ ಹಾಗೂ ಗುಲ್ಬರ್ಗ ಜೈಲಿಗೆ ಕಳಹಿಸುತ್ತಿದ್ದೇವೆ ಎಂದರು.

20 p
4 (2)

20- p-
ಬ್ಯಾನರ್ ಗಳಿಂದ ವಿವಾದ ಸೃಷ್ಟಿಯಾಗಿರುವ ಘಟನೆಗಳ ಬಗ್ಗೆ ಸಭೆಯಲ್ಲಿ ಕೇಳಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇದು ಸ್ವಯಂ ನಿಯಂತ್ರಣವೊಂದೇ ದಾರಿ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮೂಲಕ ಅಶಾಂತಿ ಸೃಷ್ಟಿಸುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಬಂಟ್ವಾಳ ಗ್ರಾಮಾಂತರ ಠಾಣೆ ಹಾಗೂ ನಗರ ಠಾಣಾ ವ್ಯಾಪ್ತಿಯಲ್ಲಿದ್ದು, ಈ ಎರಡು ಠಾಣೆಗಳ ಸರಹದ್ದು ಗೊಂದಲಗಳ ಬಗ್ಗೆ ಸಭೆಯಲ್ಲಿ ಸಭಿಕರಿಂದ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸರಹದ್ದುಗಳ ಕುರಿತಾಗಿ ಚರ್ಚಿಸಲು ವಿಶೇಷ ಸಭೆ ಕರೆದು ಚರ್ಚಿಸಲಾಗುವುದು ಎಂದರು. ಮುಂದಿನ ಎಪ್ರಿಲ್ 15 ರ ಒಳಗಾಗಿ ಬಂಟ್ವಾಳ ಟ್ರಾಫಿಕ್ ಠಾಣೆಯನ್ನು ಆರಂಭಿಸುವುದಾಗಿ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಮಾತನಾಡಿ, ಉಪ್ಪಿನಂಗಡಿಯಲ್ಲಿ ಪ್ರವಾದಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ, ಅಪ್ರಾಪ್ತ ವಯಸ್ಸಾಗಿರುವುದರಿಂದ ಬಾಲನ್ಯಾಯ ಕಾಯ್ದೆಯಡಿ ತನಿಖೆ ಮುಂದುವರಿಸುತ್ತಿರುವುದಾಗಿ ತಿಳಿಸಿದರು. ಬ್ಯಾನರ್ ಗಳಿಂದ ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಪರವಾನಿಗೆ ನೀಡುವ ಸ್ಥಳೀಯಾಡಳಿತ ಸಂಸ್ಥೆಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶೇಖರಪ್ಪ.ಎಂ, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಪ್ರೊಭೆಷನರಿ ಎಎಸ್ಪಿ ಸುಮನ , ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಠಾಣಾಧಿಕಾರಿಗಳಾದ ರಕ್ಷಿತ್ ಗೌಡ, ನಂದಕುಮಾರ್, ಚಂದ್ರಶೇಖರಯ್ಯ, ಲತೇಶ್ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *