ಬಂಟ್ವಾಳ; ಕೃಷಿ ಮತ್ತು ಋಷಿ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು, ಕೃಷಿ ಸಂಸ್ಕೃತಿ ಭೌತಿಕ ಶರೀರ ಕ್ಕೆ , ಋಷಿ ಸಂಸ್ಕೃತಿ ಸಂಸ್ಕಾರದ ಜೊತೆಗೆ ದೇಶದ ರಕ್ಷಣೆ ಮಾಡುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂ ಸೇವಾ ಸಂಘದ ಜುಮಾದಿಗುಡ್ಡೆ ಬಂಟ್ವಾಳ ಇದರ ಆಶ್ರಯದಲ್ಲಿ ತುಳುನಾಡ್ಡ್ ಕೃಷಿ ಕ್ರಾಂತಿ ಕಾರ್ಯಕ್ರಮದ ಮೂಲಕ ಕಳೆದ ನ.23 ರಂದು ಬ್ರಹ್ಮಸನ್ನಿಧಿ ಪಕ್ಕದ ಬಂಜರು ಭೂಮಿಯಲ್ಲಿ ಬೆಳೆಸಲಾದ ಭತ್ತದ ಬೆಳೆಯ ಕಟಾವು ಕಾರ್ಯಕ್ಕೆ ಮಾ.2 ರಂದು ಚಾಲನೆ ನೀಡಿ ಆಶೀರ್ವಚನ ನೀಡಿದರು.
ಆಧುನಿಕತೆಯ ಭರದಲ್ಲಿ ಕಳೆದು ಹೋಗುತ್ತಿರುವ ಕೃಷಿ ಸಂಸ್ಕೃತಿಯನ್ನು ಉಳಿಸುವ ಕಾರ್ಯ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ರವರ ನೇತೃತ್ವದಲ್ಲಿ , ಹಿಂದೂ ಸೇವಾ ಸಂಘ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಯುವಸಂಘಟನೆಗಳು ಕೇವಲ ಕೈಕಾಲು ಅಲ್ಲಾಡಿಸುವ ಡ್ಯಾನ್ಸ್ ನಲ್ಲೇ ಕಾಲಕಳೆಯುತ್ತಿರುವ ಈ ಸನ್ನಿವೇಶದಲ್ಲಿ ಕೃಷಿಪರಂಪರೆಯನ್ನು ಉಳಿಸುತ್ತಿರುವುದು ಮಾದರಿ ಕಾರ್ಯ ಎಂದರು.ಪ್ರಕೃತಿಗೆ ಪೂರಕವಾದ ಕೆಲಸಗಳನ್ನು ಸ್ವಾಗತಿಸೋಣ, ಆದರೆ ಪ್ರಕೃತಿಗೆ ಮಾರಕವಾದ ಕಾರ್ಯಗಳಿಗೆ ಅವಕಾಶ ಕೊಡಬಾರದು ಎಂದ ಅವರು, ಹಿಂದೂ ಸೇವಾ ಸಂಘ ದ ಈ ಆದರ್ಶದ ಹೆಜ್ಜೆ ಧೃಡವಾಗಲಿ ಎಂದು ಹಾರೈಸಿದರು.

ತುಳುನಾಡ್ದ ಕೃಷಿ ಕ್ರಾಂತಿ ಯ ನೇತಾರ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ರವರು ಮಾತನಾಡಿ,ಜಿಲ್ಲೆಯಲ್ಲಿ ಕೃಷಿ ಹೀನಸ್ಥಿತಿಗೆ ತಲುಪುತ್ತಿರುವ ಈ ಕಾಲಘಟ್ಟದಲ್ಲಿ , ಯುಸಂಘಟನೆಗಳು ಇಂತಹಾ ಕಾರ್ಯಗಳಿಗೆ ಮುಂದೆಬರಬೇಕಾದ ಅನಿವಾರ್ಯತೆ ಇದೆ ಎಂದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿದರು. ವೇದಿಕೆಯಲ್ಲಿ ಹರಿನಾಥ ಭಂಡಾರಿ, ಜಮೀನು ಮಾಲಕ ಕುಪ್ಪಿಲಗುತ್ತು ರಮಾನಾಥ ಶೆಟ್ಟಿ , ಸತೀಶ್ ಭಂಡಾರಿ, ಹಿಂದೂ ಸೇವಾ ಸಂಘದ ಅಧ್ಯಕ್ಷ ಚರಣ್ ಜುಮಾದಿಗುಡ್ಡೆ ವೇದಿಕೆಯಲ್ಲಿದ್ದರು. ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ; ಕಿಶೋರ್ ಪೆರಾಜೆ
