ಬಂಟ್ವಾಳ: ಶನಿವಾರ ಮುಂಜಾನೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ಕಾರೊಂದು ಬಡಿದು ಸಂಭವಿಸಿದ  ಬೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದ‌ 9 ಮಂದಿ ಮುಂಜಾನೆ 4.45 ರ ಹೊತ್ತಿಗೆ ಬಿ.ಸಿ.ರೋಡಿನ ನಾರಾಯಣ ಗುರು ವೃತ್ತಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಮೃತರನ್ನು ಬೆಂಗಳೂರಿನ ಪೀಣ್ಯಾ ನಿವಾಸಿಗಳಾದ ರವಿ (64) ರಮ್ಯ (23) ಹಾಗೂ ನಂಜಮ್ಮ ( 75) ಎಂದು ಗುರುತಿಸಲಾಗಿದ್ದು,ಉಳಿದಂತೆ ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಅವರು ಗಂಭೀರವಾಗಿ ಗಾಯಗೊಂಡು  ಮಂಗಳೂರಿನ ಆಸ್ಪತ್ರೆಯೊಂದರಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕ ಸುಬ್ರಹ್ಮಣ್ಯ ಹಾಗೂ ಕಿರಣ್ ಅವರು ಸಣ್ಣಪುಟ್ಟ ಗಾಯಗೊಂಡಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಉಳಿದಂತೆ ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ  ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಎಸ್ಪಿ ಭೇಟಿ: 

ಘಟನೆಯ ಸುದ್ದಿ ತಿಳಿದ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ‌ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಜೊತೆ ಸಮಾಲೋಚನೆ ನಡೆಸಿದರು.

ಕಳೆದ ವಾರ ಕೂಡ ವಾಹನವೊಂದು ಇದೇ ವೃತ್ತಕ್ಕೆ ಡಿಕ್ಕಿ ಹೊಡೆದು ಹಲವರು ಗಾಯಗೊಂಡಿದ್ದರು.ಅಲ್ಲದೆ ಅವೈಜ್ಞಾನಿಕ ವೃತ್ತದಿಂದಾಗಿ ಇಲ್ಲಿ ಆಗಾಗ ಅಪಘಾತಗಳು ನಡೆಯತ್ತಲೇ ಇದೆ. ದೊಡ್ಡ ಗಾತ್ರದ ವೃತ್ತ ನಿರ್ಮಾಣದ ಬಗ್ಗೆಯು ಸಾರ್ವಜನಿಕ ಮತ್ತು ಚಾಲಕ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *