ಬೈಕ್ ಅಪಘಾತದಿಂದಾಗಿ ಯುವ ವಕೀಲನ ಮೃತ್ಯು: ಬಂಟ್ವಾಳ ವಕೀಲರ ಸಂಘದ ನುಡಿನಮನ
ಬಂಟ್ವಾಳ: ಬೈಕ್ ಅಪಘಾತದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಥಮ್ ಬಂಗೇರ ಅವರಿಗೆ ಬಂಟ್ವಾಳ ವಕೀಲರ ಸಂಘದ ವತಿಯಿಂದ ನುಡಿನಮನ ಕಾರ್ಯಕ್ರಮವು ಮಂಗಳವಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಬಂಟ್ವಾಳ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ.ನ್ಯಾಯಾಯಲಯದ ನ್ಯಾಯಾಧೀಶೆ ಭಾಗ್ಯಮ್ಮ ನುಡಿ ನಮನ ಸಲ್ಲಿಸಿ ಮಾತನಾಡಿ, ವಾಹನಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ದ್ವಿಚಕ್ರ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು,ಯುವ ವಕೀಲರು ಸಂಚಾರಿ ನಿಯಮ ಪಾಲನೆಯ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್. ಅವರು ಮಾತನಾಡಿದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೊಸ್ತಾ ಅವರು ಮಾತನಾಡಿ, ಪ್ರಥಮ್ ಅವರು ಅಂಗಾಗ ದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ.ಅವರ ಕುಟುಂಬಕ್ಕೆ ಪ್ರಥಮ್ ಅಗಲಿಕೆಯ ದು;ಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಕಂಬನಿ ಮಿಡಿದರು.
ಪ್ರತಿಯೊಬ್ಬರೂ ಕೂಡ ಆರೋಗ್ಯ ವಿಮೆಯನ್ನು ಮಾಡುವ ಅಗತ್ಯವಿದ್ದು,
ಇಂತಹ ಅವಘಡಗಳು ಸಂಭವಿಸಿದಾಗ ಆರೋಗ್ಯ ವಿಮೆ ಕುಟುಂಬಕ್ಕೆ ಆಧಾರವಾಗಲಿದೆ ಎಂದರು.
ಹಿರಿಯ,ಕಿರಿಯ ಹಾಗೂ ಪ್ರಥಮ್ ನ ವಕೀಲ ಸ್ನೇಹಿತರು ನುಡಿ ನಮನ ಸಲ್ಲಿಸಿದರು. ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.
ಗಿರೀಶ್ ಮುಳಿಯಾಲ ಕಾರ್ಯಕ್ರಮ ನಿರೂಪಿಸಿದರು.