ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಅಲ್ಲಲ್ಲಿ ಅನಧಿಕೃತವಾಗಿ ಅಳವಡಿಸಲಾದ ಅನಧಿಕೃತ ಪ್ಲೆಕ್ಸ್ ತೆರವುಗೊಳಿಸುವ “ಗರುಡ”ಕಾರ್ಯಾಚರಣೆಯನ್ನು ಪುರಸಭೆ ಕೊನೆಗೂ ಮಂಗಳವಾರದಿಂದ ಆರಂಭಿಸಿದೆ.

ಬಂಟ್ವಾಳ ಪೇಟೆಯಲ್ಲಿ ಅನಧಿಕೃತವಾಗಿ ರಾರಾಜಿಸುತ್ತಿದ್ದ ಪ್ಲೆಕ್ಸ್ ಬ್ಯಾನರನ್ನು ಪುರಸಭಾಧಿಕಾರಿಗಳು ತೆರವುಗೊಳಿಸಿದ್ದಾರಾದರೂ ತಾಲೂಕಿನ ಹೃದಯಭಾಗವಾದ ಬಿ.ಸಿ.ರೋಡಿನಲ್ಲಿ ಕಾರ್ಯಕ್ರಮದ ಅವಧಿ ಮುಗಿದ ಸಹಿತ ಭಾನುವಾರ,ಸೋಮವಾರದಂದು ಅಳವಡಿಸಿರುವ ಅನಧಿಕೃತ ಪ್ಲೆಕ್ಸ್ ಗಳು ಮಾತ್ರ ರಾರಾಜಿಸುತ್ತಿದೆ.
ಯಾವುದೇ ಬ್ಯಾನರ್, ಪ್ಲೆಕ್ಸ್ ಅಳಡಿಸುವುದಿದ್ದರೆ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಮತ್ತು ಬಟ್ಟೆಯ ಬ್ಯಾನರ್ ಗೆ ಮಾತ್ರ ಅವಕಾಶವಿದ್ದು,ತಪ್ಪಿದಲ್ಲಿ ಯಾವುದೇ ಸೂಚನೆ ನೀಡದೆ ಅಂತಹ ಪ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುವುದು ಹೀಗಂತ ಜ.31 ರಂದು ಬಂಟ್ವಾಳ ಪುರಸಭೆ ಅಧಿಕೃತ ಆದೇಶವನ್ನು ಹೊರಡಿಸಿತ್ತು.
ಇದೀಗ ಬಂಟ್ವಾಳ ನಗರ ಪ್ರದೇಶದ ಪ್ಲೆಕ್ಸ್ ತೆರವುಗೊಳಿಸಿದ್ದು,ಉಳಿದ ಪ್ಲೆಕ್ಸ್ ಗಳನ್ನು ಹಂತ,ಹಂತವಾಗಿ ತೆರವುಗೊಳಿಸಲಾಗುವುದು ಎಂದು ಪುರಸಭೆಯ ಪ್ರಕಟಣೆ ತಿಳಿಸಿದೆ.
ಬಿ.ಸಿ.ರೋಡಿನಲ್ಲಿ ಪ್ಲೆಕ್ಸ್ ಹಾವಳಿಯಿಂದ ನಗರದ ಅಂದವು ಕೆಡುತ್ತಿದ್ದು,ಈ ನಿಟ್ಟಿನಲ್ಲಿ ಪುರಸಭೆ ಮಾಡಿರುವ ನಿರ್ಣಯವನ್ನು ಜಾರಿಗೆ ತರಲು ಕಾಣದ “ಕೈ” ಗಳು ಕಟ್ಟಿಹಾಕುತ್ತಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ.ಬಿ.ಸಿ.ರೋಡು ಮಾತ್ರವಲ್ಲ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು, ಮೆಲ್ಕಾರ್ ಮೊದಲಾದೆಡೆಯಲ್ಲು ಅನಧಿಕೃತ ಪ್ಲೆಕ್ಸ್ ಗೇನು ಕೊರತೆಯಿಲ್ಲ, ಮಂಗಳವಾರ ಬಂಟ್ವಾಳದಲ್ಲಿ ತೆರವುಗೊಳಿಸಿದ ಪ್ಲೆಕ್ಸ್ ಕಳೆದ ಅಕ್ಟೋಬರ್ ನಿಂದಲೇ ರಾರಾಜಿಸುತಿದ್ದು, ಪುರಸಭೆಯಾಗಲಿ ಇದನ್ನು ಹಾಕಿದವರಾಗಲಿ ಹತ್ತಿರಕ್ಕು ಸುಳಿದಿರಲಿಲ್ಲ.ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದ್ದರೂ ಬಂಟ್ವಾಳದಲ್ಲಿ ಮಾತ್ರ ಇದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ ಎಂಬುದು ಸದ್ಯದ ಮಟ್ಟಿಗೆ ಬಹಿರಂಗ ಸತ್ಯ.
ಪ್ಲಾಸ್ಟಿಕ್ ಕಂಡುಬಂದರೆ ಕ್ರಮ:
ಪುರಸಭೆ ಎಚ್ಚರಿಕೆ
ರಾಜ್ಯಾದ್ಯಂತ ಯಾವುದೇ ವ್ಯಕ್ತಿ, ಅಂಗಡಿ ಯಾವುದೇ ದಪ್ಪದ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾಂಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದ ವಸ್ತುಗಳ ಬಳಕೆ, ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ನಿಷೇಧಿಸಿರುತ್ತದೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಯಾವುದೇ ಅಂಗಡಿ ಮಳಿಗೆ, ಮಾಲ್, ಮಾರುಕಟ್ಟೆ, ಸಾರ್ವಜನಿಕವಾಗಿ ಬಳಕೆ ಮಾಡುವುದಾಗಲೀ ಅಥವಾ ಉತ್ಪಾದನೆ ಮಾಡುವುದಾಗಲೀ ಕಂಡು ಬಂದಲ್ಲಿ ಅಂತಹ ವ್ಯಕ್ತಿ, ಸಂಸ್ಥೆಗಳ ಅಂಗಡಿ ಮಾಲೀಕ, ಮಾರಾಟಗಾರರಲ್ಲಿಕಂಡು, ಬಂದರೆ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಯವರು ಪ್ರಕಟಣೆಯ ಮುಇಲಕ ಎಚ್ಚರಿಸಿದ್ದಾರೆ.
