ಪುಸ್ತಕದಲ್ಲಿರುವ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ: ಡಾ. ಐ. ಶಶಿಕಾಂತ್ ಜೈನ್
ಬಂಟ್ವಾಳ:ಪುಸ್ತಕದಲ್ಲಿರುವ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು . ಸ್ಪರ್ಧೆ ಸಾಂಕೇತಿಕವಾಗಿ ಇರುತ್ತದೆ. ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಶಾಂತಿವನ ಟ್ರಸ್ಟ್ ನ ನೈತಿಕ ಶಿಕ್ಷಣ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಯೋಗ ಮತ್ತು ನೈತಿಕ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇದರ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಹೇಳಿದರು.
ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಜ್ಞಾನವರ್ಷಿಣಿ ಮತ್ತು ಜ್ಞಾನ ದರ್ಶಿನಿ ಪುಸ್ತಕಗಳ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಶೇಖರ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪುಸ್ತಕ ನಾಶವಾದರೆ ಇತಿಹಾಸ ನಾಶವಾಗುತ್ತದೆ. ಪುಸ್ತಕ ಶಾಶ್ವತವಾದ ಸಂಪತ್ತು, ಸ್ಪರ್ಧೆಗಾಗಿ ಓದುವ ಬದಲು ಜೀವನ ಸಂಸ್ಕಾರಕ್ಕೆ ಮತ್ತು ಪ್ರೇರಣೆ ಸಿಗಲು ಓದುವ ಅಭ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯಣ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ತಾರನಾಥ ಶೆಟ್ಟಿ, ಸಿ.ಆರ್.ಪಿ. ಸತೀಶ ರಾವ್ ಮಾಣಿ ಉಪಸ್ಥಿತರಿದ್ದರು. ಶಾಂತಿವನ ಟ್ರಸ್ಟ್ ಸ್ಪರ್ಧೆಯ ಸಂಯೋಜಕ ಚೆನ್ನಕೇಶವ ಪೆರ್ನೆ ಸ್ವಾಗತಿಸಿದರು. ಶಿಕ್ಷಕಿ ಆಶಾಲತಾ ನಿರೂಪಿಸಿದರು.
ಜಿಲ್ಲಾ ಮಟ್ಟದ ಸ್ಪರ್ಧೆಗೆ ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ವಿವರ ಕೆಳಗಿನಂತಿದೆ.
ಪ್ರೌಢ ಶಾಲಾ ವಿಭಾಗ: ಭಾಷಣ ಸ್ಪರ್ಧೆ- ಯಶಿತಾ ಎಸ್.ಎಲ್.ಎನ್.ಪಿ ವಿದ್ಯಾಲಯ ಪಾಣೆಮಂಗಳೂರು, ಪ್ರಬಂಧ ಸ್ಪರ್ಧೆ- ಅನನ್ಯ ಎಸ್. ಮತ್ತು ಕಂಠಪಾಠ ಸ್ಪರ್ಧೆ- ಕೀರ್ತಿ, ಶ್ರೀರಾಮ ಪ್ರೌಢ ಶಾಲೆ ಕಲ್ಲಡ್ಕ. ಚಿತ್ರಕಲಾ ಸ್ಪರ್ಧೆ -ಪೂರ್ವಿಕಾ ಯಂ .ಡಿ. ಸರಕಾರಿ ಪ್ರೌಢ ಶಾಲೆ ಕಾವಳಕಟ್ಟೆ.
ಪ್ರಾಥಮಿಕ ಶಾಲಾ ವಿಭಾಗ: ಭಾಷಣ ಸ್ಪರ್ಧೆ- ಪಿ.ಸುಸ್ಮಿತಾ ಭಟ್, ಪ್ರಬಂಧ ಸ್ಪರ್ಧೆ –ರಾಜೇಶ್ವರಿ ಭಟ್, ಚಿತ್ರಕಲಾ ಸ್ಪರ್ಧೆ – ನಿನಾದ್ ಕೈರಂಗಳ ಇವರು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ವಿದ್ಯಾರ್ಥಿಗಳು, ಕಂಠಪಾಠ ಸ್ಪರ್ಧೆ-ದೃಶ್ಯಾ ಎಸ್.ವಿ.ಎಸ್. ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಬಂಟ್ವಾಳ .