ಬಂಟ್ವಾಳ: ಬಡಗಬೆಳ್ಳೂರಿನ ದೇವಸ್ಥಾನವೊಂದರ ಕಳ್ಳತನ ಪ್ರಕರಣ; 20 ವರ್ಷಗಳ ಬಳಿಕ ಆರೋಪಿಯ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಡಗಬೆಳ್ಳೂರಿನ ದೇವಸ್ಥಾನವೊಂದರ ಕಳ್ಳತನ ಮಾಡಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಬಂಧಿಸಲಾಗಿದೆ. ಕಳೆದ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಂಧಿತ ಆರೋಪಿಯನ್ನು ಪಾಣಾಜೆ ಗ್ರಾಮದ ಉಡ್ಡಂಗಳ ನಿವಾಸಿ ಮೊಹಮ್ಮದ್ ಶರೀಫ್ (44) ಎಂದು ಗುರುತಿಸಲಾಗಿದೆ. ಈತ 2004ರ ನವೆಂಬರ್‌ನಲ್ಲಿ ಬಡಗಬೆಳ್ಳೂರಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಕರ್ನಾಟಕ ಮತ್ತು ಕೇರಳ ರಾಜ್ಯದ ಹಲವಾರು ಕಡೆ ವಿಳಾಸ ಬದಲಾವಣೆ ಮಾಡಿಕೊಂಡು ಬಂಧನಕ್ಕೆ ಸಿಗದೆ ಕಾಸರಗೋಡಿನ ಪುತ್ತಿಗೆಯಲ್ಲಿ ವಾಸವಾಗಿದ್ದನು. ಕೊನೆಗೂ ಮಾಹಿತಿ ಕಲೆ ಹಾಕಿದ ಪೊಲೀಸರು ಕಾಸರಗೋಡಿನಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈತನ ವಿರುದ್ಧ ಬಂಟ್ವಾಳ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಆರೋಪಿ ಮೊಹಮ್ಮದ್ ಶರೀಫ್ ಇತ್ತೀಚಿಗಷ್ಟೇ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಕೊನೆಗೂ ಬಂಟ್ವಾಳ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೀಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.