ಶ್ರೀ ಗಣೇಶೋತ್ಸವ ಸೌಹಾರ್ದತೆಗೆ ಪ್ರೇರಣೆ: ಮಾಣಿಲ ಶ್ರೀ
ಬಂಟ್ವಾಳ: ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಪ್ರಸಕ್ತ ಸಾಮಾಜಿಕ ಸೌಹಾರ್ದತೆಗೆ ಪ್ರೇರಣೆ ನೀಡುತ್ತಿದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲ್ಲಿಪಾದೆ ಸಂತ ಅಂತೋನಿ ಚರ್ಚಿನ ಧರ್ಮಗುರು ರಾಬಟ್ರ್ ಡಿಸೋಜ ಆಶೀರ್ವಚನ ನೀಡಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಸಾಮರಸ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ’ ಎಂದರು.
ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ ಆರ್.ಪೂಜಾರಿ ಮಾತನಾಡಿ, ‘ ಜಿಲ್ಲೆಯಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ ಎಂದರು. ಉದ್ಯಮಿ ಬಿ.ರಘುನಾಥ ಸೋಮಯಾಜಿ ಶುಭ ಹಾರೈಸಿದರು. ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್ ವೇದಿಕೆಯಲ್ಲಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.
ಕನ್ಯಾಡಿ ಶ್ರೀ ಭೇಟಿ:
ಈ ಸಂದರ್ಭದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಅಗಮಿಸಿ ದೇವರದರ್ಶನ ಪಡೆದರು.ಸಮಿತಿ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿದರು.