ಶಿಕ್ಷಕರ ಕೆಲಸವು ವೃತ್ತಿಯಲ್ಲ, ಅದು ಸೇವೆ : ಶಾಲಿನಿ ಮೆಹಂದಳೆ
ಬಂಟ್ವಾಳ:– ಶಿಕ್ಷಕರ ಕೆಲಸವು ವೃತ್ತಿಯಲ್ಲ, ಅದು ಸೇವೆ. ಶಿಕ್ಷಕನು ವಿದ್ಯಾರ್ಥಿಗಳ ಸರ್ವತೋಮುಖಗಳ ಪ್ರಗತಿಯ ದೃಷ್ಟಿಯಿಂದ ಅರ್ಹನಿಶಿ ಚಿಂತಿಸುವ ಶಿಲ್ಪಿಎಂದು ಬಂಟ್ವಾಳ ತಾಲೂಕು ಮಣಿನಾಲ್ಕೂರು ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲಿನ ಪ್ರಾಂಶುಪಾಲರಾದ ಶಾಲಿನಿ ಮೆಹಂದಳೆ ಹೇಳಿದರು.
ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನಲ್ಲಿ ಎಸ್.ವಿ.ಎಸ್ ಸಮೂಹ ಸಂಸ್ಥೆಗಳು ಬಂಟ್ವಾಳ ಇವುಗಳ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ರೂವಾರಿಯೇ ಶಿಕ್ಷಕ. ಅಂತಹ ವಿಶಾಲ ದೃಷ್ಟಿಕೋನ ಶಿಕ್ಷಕನಲ್ಲಿರಬೇಕು ಎಂದು ಅವರು ಗುರುವಾದವ ನಿರ್ದಿಷ್ಠ ಗುರಿ ಹೊಂದಿರಬೇಕು. ಆ ಗುರಿ ವಿದ್ಯಾರ್ಥಿಗಳ ಹಿತಚಿಂತನೆಯ ಗುರಿಯಾಗಿರಬೇಕು. ವಿದ್ಯಾರ್ಥಿಗಳಲ್ಲಿಯೂ ಗುರುವಿನ ಕುರಿತು ಸರ್ವ ಸಮರ್ಪಣಾ ಭಾವ ಹೊಂದಿರಬೇಕು ಎಂದವರು ಹೇಳಿದರು.
ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಆಡಳಿತಾತ್ಮಕ ಪ್ರಾಂಶುಪಾಲರಾದ ಡಾ. ಸುಯೋಗ ವರ್ಧನ್ ಡಿ.ಎಮ್ ರವರು ಮಾತನಾಡಿ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುವ ರೂವಾರಿಗಳು ಶಿಕ್ಷಕರು. ತಂದೆ ತಾಯಿಗಳ ಮಾತಿಗಿಂತಲು ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮವನ್ನು ಬಿರುತ್ತದೆ ಎಂದರು.
ಶ್ರೀ ವೆಂಕಟರಮಣ ಸ್ವಾಮೀ ಸಮೂಹ ಸಂಸ್ಥೆಗಳ ಸಂಚಾಲಕರಾದ ಕೆ. ರೇಖಾ ಶೆಣೈ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್ ಸ್ವಾಗತಿಸಿದರು. ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ ಬಿ ಅತಿಥಿಗಳನ್ನು ಪರಿಚಯಿಸಿದರು. ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಜೂಲಿ ಟಿ.ಜೆ ವಂದಿಸಿದರು. ವಿದ್ಯಾರ್ಥಿಗಳಾದ ಪ್ರತೀಕ್ ನಾಯ್ಕ್ ಮತ್ತು ಪ್ರಥಮ್ ತೇಜಸ್ವಿ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತಾರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.