ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ.ಕ್ಕೆ 9,44,577.88 ರೂ.ನಿವ್ವಳ ಲಾಭ : ಕೊಟ್ಟಾರಿ
ಬಂಟ್ವಾಳ: ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ.ವು 2023-2024 ನೇ ಸಾಲಿನಲ್ಲಿ 2. 14 ಕೋ.ರೂ. ವಾರ್ಷಿಕವಾಗಿ ವಹಿವಾಟು ನಡೆಸಿ 9,44,577.88 ರೂ.ನಿವ್ವಳ ಲಾಭ ಗಳಿಸಿದೆ ಎಂದು ಮಾಜಿ ಶಾಸಕ, ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ತಿಳಿಸಿದ್ದಾರೆ.
ಕಲ್ಲಡ್ಕ ಶ್ರೀರಾಮ ಮಂದಿರದ ಮಾದವ ಸಭಾ ಭವನದಲ್ಲಿ ಶುಕ್ರವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತೀ ವರ್ಷ ಸಂಘವು ಸದಸ್ಯರಿಗೆ ಬೋನಸು ಹಾಗೂ ಡಿವಿಡೆಂಟ್ ನೀಡುತ್ತಾ ಬಂದಿದ್ದು,ಪ್ರಸ್ತುತ ಸಾಲಿನಲ್ಲಿ ಪ್ರತೀ ಲೀಟರಿಗೆ 97 ಪೈಸೆ ಬೋನಸ್ ಮತ್ತು ಶೇ. 20 ಡಿವಿಡೆಂಟ್ ನ್ನು ಘೋಷಿಸಿದರು.
ಸಂಘವು 2023-24ನೇ ಸಾಲಿನಲ್ಲಿ 57.92 ಲ.ರೂ. ದುಡಿಯುವ ಬಂಡವಾಳ ಹೊಂದಿರುತ್ತದೆ. ಮಂಗಳೂರು ದ.ಕ.ಹಾಲು ಒಕ್ಕೂಟದಲ್ಲಿ 9,08 ಲ.ರೂ. ಪಾಲು ಬಂಡವಾಳವನ್ನು ಹೊಂದಿರುತ್ತದೆ ಎಂದರು.ಪ್ರಸ್ತುತ ಲೆಕ್ಕಪರಿಶೋಧನೆಯಲ್ಲಿಯು ಸಂಘ ‘ಎ’ ಶ್ರೇಣಿಯನ್ನ ಪಡೆದಿದ್ದು, ಪ್ರತೀ ವರ್ಷವು ಹಾಲು ಉತ್ಪಾದಕರಿಗೆ ಬೋನಸ್ ಹಾಗೂ ಹೈನುಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುತ್ತಿದೆ ಎಂದ ಅವರು ಹಾಲಿನ ಗುಣಮಟ್ಟವನ್ನು ಕಾಯ್ದಕೊಳ್ಳುವಲ್ಲಿ ಎಲ್ಲಾ ಸದಸ್ಯರ ಸಹಕಾರವನ್ನು ಯಾಚಿಸಿದರು.
ಸಂಘದ ಉಪಾಧ್ಯಕ್ಷ ರತ್ನಾಕರ ಭಂಡಾರಿ, ನಿರ್ದೇಶಕರುಗಳಾದ ರತ್ನಾಕರ ಪ್ರಭು, ಜಯರಾಮ ಕೊಟ್ಟಾರಿ, ಗೋಪಾಲ ನಾಯ್ಕ, ಪುಷ್ಪರಾಜ,ನಾರಾಯಣ ಕೋಟ್ಯಾನ್, ಚೇತನ್, ಗುರುವಪ್ಪ ಗೌಡ,ಮಿಥುನ್ ,ವನಿತಾ , ವಿಜಯಲಕ್ಮೀ, ಕೆ.ಎಂ.ಎಫ್ ನ ಉಪವ್ಯವಸ್ಥಾಪಕ ಡಾ. ಕೇಶವ ಸುಳಿ, ಬಂಟ್ವಾಳ ವಲಯ ವಿಸ್ತರಣಾಧಿಕಾರಿ ಪ್ರಫುಲ್ಲ, ಕಲ್ಲಡ್ಕ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಮಂದಾರ ಜೈನ್ ವೇದಿಕೆಯಲ್ಲಿದ್ದರು.
ಸಿಬ್ಬಂದಿಗಳಾದ ರೇವತಿ ಹಾಗೂ ರವಿ ಅವರು ಸಹಕರಿಸಿದರು.ಸಂಘದಲ್ಲಿ ಹಾಲು ಪರೀಕ್ಷೆ ನಡೆಸುತ್ತಿದ್ದು, ಪ್ರಸ್ತುತ ವಯೋನಿವೃತ್ತಿ ಹೊಂದಿದ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಅದೇರೀತಿ ಎಸ್.ಎಸ್.ಎಲ್.ಸಿ.ಹಾಗೂ ದ್ವಿತೀಯ ಪಿ.ಯುಸಿ. ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಹಾಗೂ ಅವಲಂಬಿತರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಪುರಸ್ಕಾರಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕೆ.ಅವರು ವಾರ್ಷಿಕ ವರದಿ ವಾಚಿಸಿದರು.ರಾಜೇಶ್ ಕೊಟ್ಟಾರಿ ಸ್ವಾಗತಿಸಿ, ವಂದಿಸಿದರು.