ಕುಪ್ಪೆಪದವು ಯುವವಾಹಿನಿಯಿಂದ ಕೃಷ್ಣ ವೇಷ ಸ್ಪರ್ಧೆ
ಕುಪ್ಪೆಪದವು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ)ಕುಪ್ಪೆಪದವು ಘಟಕದ ವತಿಯಿಂದ, ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ 10ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 5ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ ಕುಪ್ಪೆಪದವಿನ ಆಶಾಕಿರಣ ಚರ್ಚ್ ಹಾಲ್ ನಲ್ಲಿ ಭಾನುವಾರ ನಡೆಯಿತು.

ಕುಳವೂರು ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಯುವವಾಹಿನಿ ಸಮಾಜ ಮುಖಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ, ಪ್ರತಿ ವರ್ಷ ಕೃಷ್ಣ ವೇಷ ಸ್ಪರ್ಧೆಯನ್ನು ಹಮ್ಮಿಕೊಂಡು ಮಕ್ಕಳಲ್ಲಿ ಜೊತೆಗೆ ಎಲ್ಲರಲ್ಲೂ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದರು.

ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕುಪ್ಪೆಪದವು ಇಮಾಕ್ಯುಲೆಟ್ ಹಾರ್ಟ್ ಆಫ್ ಮೇರಿ ಚರ್ಚ್ ನ ಧರ್ಮಗುರುಗಳಾದ ಫಾ|ಮಾರ್ಷೆಲ್ ಸಲ್ದಾನ, ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಸುವುದರ ಜೊತೆಯಲ್ಲಿ ನಾವು ಮತ್ತು ಮಕ್ಕಳಲ್ಲಿ ಶ್ರೀಕೃಷ್ಣನ ಬದುಕಿನ ಉನ್ನತ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಕೃಷ್ಣ ಪ್ರಜ್ಞೆಯಿಂದ ನಮ್ಮ ಜೀವನ ಸಾಗಿಸಿದರೆ ಅದು ಕೃಷ್ಣನಿಗೆ ಸಲ್ಲಿಸುವ ಪೂಜೆ ಎಂದರು.ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಬ್ರಹ್ಮಶ್ರೀ ನಾರಾಯಣ ಗುರು ಪರಿಪಾಲನಾ ಸಂಘದ ರಾಜ್ಯ ಉಪಾಧ್ಯಕ್ಷ ಬಿ. ನವೀನ್ ಚಂದ್ರ ಪೂಜಾರಿ, ತೀರ್ಪುಗಾರ್ತಿ ಶ್ರೀಮತಿ ಗೀತಾ ಮಾತನಾಡಿದರು.

ಬಜಪೆ ಘಟಕದ ಮಾಜಿ ಅಧ್ಯಕ್ಷ ದೇವರಾಜ್ ಅಮೀನ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಯುವವಾಹಿನಿ ಕುಪ್ಪೆಪದವು ಘಟಕದ ಅಧ್ಯಕ್ಷ ಅಕ್ಷಿತ್ ಕುಮಾರ್ ಅಧ್ಯಕ್ಷೀಯ ಭಾಷಣದಲ್ಲಿ ಯುವವಾಹಿನಿಯ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವ ಮಹನೀಯರನ್ನು ಮತ್ತು ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
ಘಟಕದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕಿ ಶ್ರೀಮತಿ ಅಕ್ಷತಾ, ಕುಪ್ಪೆಪದವು ಘಟಕದ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಅಂಬೆಲೊಟ್ಟು, ಮಾಜಿ ಅಧ್ಯಕ್ಷರುಗಳಾದ ಅಜಯ್ ಅಮೀನ್ ನಾಗಂದಡಿ, ಸತೀಶ್ ಕೆ.ಎಂ., ಜಗದೀಶ್ ದುರ್ಗಾಕೋಡಿ ಮತ್ತು ಸೌಮ್ಯಾ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
10 ವರ್ಷದವರೆಗಿನ 60ಕ್ಕೂ ಹೆಚ್ಚು ಮಕ್ಕಳು ವಿವಿಧ ಶೈಲಿಯ ಕೃಷ್ಣ ವೇಷದಲ್ಲಿ ಮನರಂಜಿಸಿ ಗಮನ ಸೆಳೆದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ಭಾಗವಹಿಸಿದ್ದ ಎಲ್ಲಾ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.
ಘಟಕದ ಪದಾಧಿಕಾರಿಗಳು, ಸದಸ್ಯರು, ಸಮಾಜ ಭಾಂದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಶ್ರೀಮತಿ ಗೀತಾ ಮತ್ತು ಪ್ರೇಮ ತೀರ್ಪುಗಾರರಾಗಿ ಸಹಕರಿಸಿದ್ದರು. ಅರುಣ್ ಕುಮಾರ್ ಅಂಬೆಲೊಟ್ಟು ಸ್ವಾಗತಿಸಿದರು. ಧನ್ಯಶ್ರೀ ಮುಗಿಲ ನಿರೂಪಿಸಿ, ಕಾರ್ಯದರ್ಶಿ ರೇಣುಕಾ ಬಾಲಕೃಷ್ಣ ವಂದಿಸಿದರು.