ಸುಸ್ಥಿರವಾದ ರಾಷ್ಟ್ರದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ವ: ಡಾ. ಅನುರಾಧ ಕುರುಂಜಿ
ಬಂಟ್ವಾಳ : “ಸುಸ್ಥಿರವಾದ ರಾಷ್ಟ್ರದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ವವಾದುದು. ವಿದ್ಯಾರ್ಥಿ ದೆಸೆಯಲ್ಲಿಯೇ ರಾಷ್ಟ್ರ, ಸಮಾಜದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯ ಆಗಬೇಕು ಎಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಅನುರಾಧ ಕುರುಂಜಿ ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷ 2024-25ನೇ ಸಾಲಿನ ರಾಷ್ಟ್ರೀಯ ಸೇವಾಯೋಜನೆ ಕಾರ್ಯಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ವಾಂಗೀಣ ವ್ಯಕ್ತಿತ್ವ ವಿಕಸನದಲ್ಲಿ ರಾಷ್ಟ್ರೀಯ ಸೇವಾಯೋಜನೆಯು ಅವಶ್ಯವಾದುದು. ಇಂತಹ ಯೋಜನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ ವಹಿಸಿ, ರಾಷ್ಟ್ರೀಯ ಸೇವಾಯೋಜನೆಯ ಎಲ್ಲಾ ಅಂಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು, ಉತ್ತಮ ನಾಯಕತ್ವದ ಗುಣಗಳನ್ನು ತಮ್ಮದಾಗಿಸಿಕೊಳ್ಳಬೇಕೆಂದರು.
ರಾಷ್ಟ್ರೀಯ ಸೇವಾಯೋಜನಾಧಿಕಾರಿ ಕಿಟ್ಟು ರಾಮಕುಂಜ ಸ್ವಾಗತಿಸಿ, ಉಪನ್ಯಾಸಕ ಶಶಿಧರ್.ಎಸ್ ಅತಿಥಿಗಳನ್ನು ಪರಿಚಯಿಸಿದರು. ಸಹಯೋಜನಾಧಿಕಾರಿ ರೂಪಾ ವಂದಿಸಿದರು. ವಿದ್ಯಾರ್ಥಿನಿಯರಾದ ಕಾವ್ಯಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಘಟಕ ನಾಯಕರುಗಳಾದ ಧನುಷ್ ಮತ್ತು ಪ್ರಾಜ್ಞವಿ ವೇದಿಕೆಯದ್ದರು.
ವಿದ್ಯಾರ್ಥಿನಿ ತೃಪ್ತಿ, ಡಿ. ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸ್ವಯಂಸೇವಕರಿಗೆ ಓರಿಯಂಟೇಶನ್
ಕಾರ್ಯಕ್ರಮ ನಡೆಯಿತು.