ಬಂಟ್ವಾಳ : ಬಾರ್‌ನಲ್ಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಕುಖ್ಯಾತ ರೌಡಿಗಳ ಬಂಧನ

ಬಾರ್‌ನಲ್ಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಸಂತೋಷ್ ಮತ್ತು ವಿಶ್ವನಾಥ್ ಎಂಬ ಇಬ್ಬರೂ ಕುಖ್ಯಾತ ರೌಡಿಗಳನ್ನು ಪುಂಜಾಲಕಟ್ಟೆ ಎಸ್‌ಐ ನಂದಕುಮಾರ್ ನೇತೃತ್ವದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಮದಪದವು ಪಾಂಗಾಳ ಪದವು ಪ್ರಕಾಶ್ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಆಗಸ್ಟ್ 4 ರಂದು ರಾತ್ರಿಯ ವೇಳೆ ಈ ಇಬ್ಬರೂ ರೌಡಿಗಳು ಬಂಟ್ವಾಳದಿಂದ ವಾಮದಪದವು ಕಡೆಗೆ ಪ್ರಯಾಣ ಬೆಳೆಸಿದ್ದು, ಪ್ರಕಾಶ್ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾರೆ. ಆ ಬಳಿಕ ಬಾರ್ ಸಿಬ್ಬಂದಿ ಹಾಗೂ ಅಡುಗೆ ಭಟ್ಟರ ಮೇಲೆ ರಾಡ್‌ಗಳಿಂದ ಅಮಾನುಷ ಹಲ್ಲೆ ನಡೆಸಿದ್ದಾರೆ.
ಅಡುಗೆಭಟ್ಟರ ತಲೆಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೌಡಿಗಳು ಬಾರ್‌ನ ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಬಾರ್‌ನೊಳಗಿನ ಇತರ ಬೆಲೆಬಾಳುವ ಆಸ್ತಿಯನ್ನು ಧ್ವಂಸಗೊಳಿಸಿದ್ದಾರೆ. ಈ ದೃಶ್ಯವು ಬಾರ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ. ಆರೋಪಿಗಳಾದ ಬಂಟ್ವಾಳ ನಿವಾಸಿಗಳಾದ ಸಂತೋಷ್ ಮತ್ತು ವಿಶ್ವನಾಥ್ ಅವರು ಪರಾರಿಯಾಗಿದ್ದಾರೆ.
ಇಬ್ಬರೂ ಆರೋಪಿಗಳಲ್ಲಿ ಈ ಪೈಕಿ ಒಬ್ಬ ಆರೋಪಿ ಸಂತೋಷ್ ಈ ಹಿಂದೆ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದನು. ಈ ಹಿಂದೆ ಬಂಟ್ವಾಳದಲ್ಲಿ ವ್ಯಕ್ತಿಯೊಬ್ಬರ ಕೈ ಕತ್ತರಿಸಿದ ಘಟನೆಯಲ್ಲಿ ಭಾಗಿಯಾಗಿದ್ದ ಈತನ ವಿರುದ್ಧ ಬಂಟ್ವಾಳ ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ದಾಖಲಾಗಿತ್ತು.ಇದೀಗ ಈ ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಪುಂಜಾಲಕಟ್ಟೆಯ ಪೊಲೀಸ್ ತಂಡವು ಪತ್ತೆ ಹಚ್ಚಿ ಆಗಸ್ಟ್ 21 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.