ಮಂಗಳೂರು: ಸಾಲ ತೀರಿಸಲು ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ನಾಲ್ವರ ಬಂಧನ

ಕೈತುಂಬಾ ಸಾಲ ಮಾಡಿ ಆ ಸಾಲವನ್ನು ತೀರಿಸಲಾದೆ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಸಾಲವನ್ನು ತೀರಿಸಲು ಯೂಟ್ಯೂಬ್ ನೋಡಿ ನಕಲು ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ. ಕಾಸರಗೋಡಿನ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಪ್ರಮುಖ ಆರೋಪಿ ಪ್ರಿಯೇಶ್ ಸಾಲದ ಸುಳಿಯಲ್ಲಿ ಸಿಲುಕಿದ್ದು, ಸಾಲ ತೀರಿಸಲು ನಕಲಿ ನೋಟುಗಳನ್ನು ಮುದ್ರಿಸಲು ಮುಂದಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಆರೋಪಿಗಳು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದರು. ಬಳಿಕ ಈ ಖೋಟಾ ನೋಟುಗಳನ್ನು ಮಂಗಳೂರು ನಗರದ ಕ್ಲಾಕ್‌ಟವರ್ ಬಳಿಯ ಲಾಡ್ಜ್‌ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 500 ರೂ. ಮುಖಬೆಲೆಯ ಖೋಟಾನೋಟು ವಶಕ್ಕೆ ತೆಗೆದುಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಕೇರಳದ ಕಾಸರಗೋಡಿನ ವಿ ಪ್ರಿಯೇಶ್ (38), ವಿನೋದ್ ಕುಮಾರ್ ಕೆ (33), ಅಬ್ದುಲ್ ಖಾದರ್ ಎಸ್ ಎಂ (58) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಯೂಬ್ ಖಾನ್ (51) ಎಂದು ಗುರುತಿಸಲಾಗಿದೆ. ಮತ್ತು ಬಂಧಿತರಿಂದ 2,13,500 ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾನೋಟುಗಳು, 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.