ಎಡಪದವು, ಕುಪ್ಪೆಪದವು ಸುತ್ತಮುತ್ತ ಬಿರುಗಾಳಿಯಿಂದ ಅವಾಂತರ, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿ
ಕುಪ್ಪೆಪದವು: ಬುಧವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಅವಾಂತರ ಸೃಷ್ಠಿಸಿದೆ.
ಇಲ್ಲಿನ ಬೋರುಗುಡ್ಡೆ ಬೀಡಿ ಕಾಲನಿಯಲ್ಲಿ ಮನೆಗಳ ಮೇಲೆ ಮರಗಳು ಉರುಳಿ ಬಿದ್ದು ಹಾನಿಯಾಗಿದೆ. ಅಲ್ಲದೇ ಸುಳಿಗಾಳಿ ಇಲ್ಲಿನ ತೋಟಗಳಲ್ಲಿ ಅಡಿಕೆ ಮರಗಳನ್ನು ಸೀಳಿ ಹಾಕಿದೆ.
ಕೊರ್ಡೇಲ್ ಎಂಬಲ್ಲಿ ಹೇಮಾವತಿ ನಾಯ್ಕ್ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದರೆ, ಇಲ್ಲಿ ಬ್ರಹತ್ ಮರ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸ್ಥಳೀಯ ಯುವಕರು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಮರ ತೆರವುಗೊಳಿಸಿದರು. ಅಲ್ಲದೇ ಹಲವು ಮನೆಗಳ ಶೀಟುಗಳು ಗಾಳಿಗೆ ಹಾರಿ ಹೋಗಿವೆ.
ಎಡಪದವು ಮೆಸ್ಕಾಂ ವ್ಯಾಪ್ತಿಯ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿತ್ತು.ಕುದುರೆ ಬೆಟ್ಟು ಎಂಬಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಹಾನಿಯಾಗಿದೆ.
ಕುಪ್ಪೆಪದವು ಬಾರ್ದಿಲ ಸಾಂಬಸದಾಶಿವ ದೇವಸ್ಥಾನದ ಬಳಿ ಮರವೊಂದು ಉರುಳಿ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗೆ ಬಿದ್ದಿವೆ ಇದರಿಂದಾಗಿ ಕುಪ್ಪೆಪದವು-ಕಾಪಿಕಾಡು-ಬಾರ್ದಿಲ-ಇರುವೈಲು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಪೂವಣಿಬೆಟ್ಟು ಮತ್ತು ಕೊರಿಬೆಟ್ಟು ಎಂಬಲ್ಲಿ ತಲಾ ಒಂದು ಕಂಬ ತುಂಡಾಗಿ ಬಿದ್ದಿದೆ.