ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳ ದೀಪಪ್ರದಾನ ಕಾರ್ಯಕ್ರಮ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ೧೩ನೇ ವರ್ಷದ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ- “ದೀಪ ಪ್ರದಾನ” ಕಾರ್ಯಕ್ರಮವು ಮಂಗಳವಾರ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಆಜಾದ್ ಸಭಾಂಗಣದಲ್ಲಿ ನಡೆಯಿತು.

ದೀಪಪ್ರಜ್ವಲನ ಹಾಗೂ ಸರಸ್ವತಿವಂದನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅನಂತರ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ,ಸಿಹಿ ವಿತರಿಸಲಾಯಿತು. ವಿದ್ಯಾರ್ಥಿಗಳು ಶ್ರೀರಾಮನ ಮೂರ್ತಿಯ ಎದುರು ಹಣತೆ ಹಚ್ಚುವ ಮೂಲಕ ದೇಶ ಚಿಂತನೆಯ ಸಂಕಲ್ಪ ತೊಟ್ಟರು.
ಈ ಸಂದರ್ಭದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು ಭಾವೀ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೆಳಗುವ ದೀಪ ಕೊಡುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಹಸ್ತಾಂತರಿಸಿದರು. .
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾ ದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ,ಜಗತ್ತಿನಲ್ಲಿ ನಮ್ಮ ಸಾಧನೆಗಳ ಹೆಜ್ಜೆ ಗುರುತು ಹಾಕಿ ಹೋಗಬೇಕು, ಈ ದೇಶದಲ್ಲಿ ಹಲವಾರು ವ್ಯಕ್ತಿಗಳು ಸಾಧನೆ ಮಾಡಿದ್ದಾರೆ. ನಾವು ಕೂಡ ಅದೇ ದಾರಿಯಲ್ಲಿ ಸಾಗಬೇಕು ಎಂದು ನುಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಮ್ಮುಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ ಎಚ್ ರಾಜೇಶ್ ಪ್ರಸಾದ್ ಅವರು ಮಾತನಾಡಿ,ಈ ವಿದ್ಯಾಲಯವು ಹಾಕಿ ಕೊಟ್ಟ ಸಂಸ್ಕಾರಯುತ ಶಿಕ್ಷಣದ ಅಡಿಪಾಯದಿಂದ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವಂತೆ ಕರೆ ನೀಡಿದರು.
ಉಡುಪಿಯ ಶಾಸಕ ಯಶಪಾಲ್ ಸುವರ್ಣ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಕೆ. ಸಿ ಮಹದೇಶ್ ,ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ರಾಷ್ಟ್ರ ಸೇವಿಕಾ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ ಅವರು ಅಂತಿಮ ಪದವಿ ವಿದ್ಯಾರ್ಥಿಗಳ ಸಾಧನೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಂತಿಮ ಪದವಿ ವಿದ್ಯಾರ್ಥಿಗಳು ತಮ್ಮ ಕೊಡುಗೆಯನ್ನು ವಿದ್ಯಾಸಂಸ್ಥೆಗೆ ನೀಡಿದರು.
ವಿದ್ಯಾರ್ಥಿನಿ ಕು. ದಿವ್ಯಲಕ್ಷ್ಮಿ ಸ್ವಾಗತಿಸಿದರು. ಕು. ಪುನೀತಾ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿ ಅಕ್ಷಯ ನರಸಿಂಹ ವಂದಿಸಿದರು. ಕು. ಪದ್ಮಶ್ರೀ, ವೈಯಕ್ತಿಕ ಗೀತೆ ಹಾಡಿದರು.