ಕುಕ್ಕೆರೋಡಿ: ಅಡಿಕೆ ಸುಲಿಯುವ ಘಟಕವನ್ನು ಸ್ಥಗಿತಗೊಳಿಸದಂತೆ ರೈತರಿಂದ ಮನವಿ
ಬಂಟ್ವಾಳ: ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪಡುಕೋಡಿ ಗ್ರಾಮದ ಕುಕ್ಕೆರೋಡಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಲ್ಪತರು ಯಾಂತ್ರೀಕೃತ ಅಡಿಕೆ ಸುಲಿಯುವ ಘಟಕವನ್ನು ಸ್ಥಗಿತಗೊಳಿಸದಂತೆ ಬಂಟ್ವಾಳ,ಬೆಳ್ತಂಗಡಿ,ವಿಟ್ಲ ಹಾಗೂ ಮಂಗಳೂರು ಭಾಗದ ಕೃಷಿಕರ ನಿಯೋಗ ಆಯಾಯ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಡಿಕೆ ಕೃಷಿ ನಮ್ಮ ಜೀವನಾಧಾರವಾಗಿದೆ. ತುರ್ತು ಸಂದರ್ಭಗಳಲ್ಲಿ ಅಡಿಕೆ ಸುಲಿಯುವ ಕಾರ್ಮಿಕರಿಲ್ಲದೆ ಒದ್ದಾಡುತ್ತಿದ್ದಾಗ ನಮಗೆ ಧೈರ್ಯ ನೀಡಿದ್ದು ಕುಕ್ಕೆರೋಡಿಯಲ್ಲಿ ಕಾರ್ಯಾಚರಿಸುತ್ತಿರುವ ಕಲ್ಪತರು ಯಾಂತ್ರೀಕೃತ ಅಡಿಕೆ ಸುಲಿಯುವ ಘಟಕ ಎಂದು ಮನವಿಯಲ್ಲಿತಿಳಿಸಲಾಗಿದೆ.
ಕೃಷಿಯಲ್ಲಿ ಯಾಂತ್ರಿಕತೆ ಅಳವಡಿಸಿ ಎನ್ನುವುದು ಸರಕಾರದ ಮತ್ತು ಕೃಷಿ ತಜ್ಞರ ಮೂಲಮಂತ್ರವಾದರೂ ಅಡಿಕೆ ಕೃಷಿಯಲ್ಲಿ ಯಾಂತ್ರೀಕತೆಯ ಪ್ರಯೋಗ ಇನ್ನೂ ಗುರುತರವಾದ ಮಟ್ಟದಲ್ಲಿ ಇಲ್ಲದಾಗಿರುವ ಸಂದರ್ಭದಲ್ಲಿ ಕಲ್ಪತರು ಅಡಿಕೆ ಸುಲಿಯು ಘಟಕದ ಮಾಲಕರು ಒಂದಷ್ಟು ಯಂತ್ರ ಹಾಗೂ ಕಾರ್ಮಿಕರನ್ನು ನಿಯೋಜಿಸಿ ಅಡಿಕೆ ಸುಲಿಯುವ ಮತ್ತು ಪ್ರತ್ಯೇಕಿಸುವ ಸಮಸ್ಯೆಗೊಂದು ಪರಿಹಾರ ಕಂಡುಹಿಡಿದಿದ್ದಾರೆ ಇದರಿಂದಾಗಿ ನಮ್ಮಂತಹ ರೈತರಿಗೆ ಪ್ರಯೋಜನಕಾರಿಯಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಈ ಘಟಕದಿಂದ ಬರುವ ಶಬ್ದ ಸಾಮಾನ್ಯ ರೈಸ್ ಮಿಲ್‌ನ ಶಬ್ಬಕ್ಕಿಂತ ತುಸು ಹೆಚ್ಚಾಗಿರಬಹುದಾದರೂ ಕರ್ಕಶವೇನಲ್ಲ, ಅಡಿಕೆಯ ಧೂಳು ಹೊರ ಹೋಗದಂತೆ ಸಿಪ್ಪೆ ಬೀಳುವ ಜಾಗದಲ್ಲಿ ಶೆಡ್ ನೆಟ್ ಹೊದಿಕೆ ಹಾಕಿರುವುದಲ್ಲದೆ ಯಾಂತ್ರೀಕೃತ ನೀರಿನ ಸಿಂಪಡನಾ ವ್ಯವಸ್ಥೆಯನ್ನು ಘಟಕದ ಮಾಲಕರು ಮಾಡಿರುತ್ತಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಹಾಗಾಗಿ ಈ ಘಟಕದಿಂದ ಧೂಳು ಮತ್ತು ಶಬ್ದ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ತೊಂದರೆಯಾಗಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಈ ಸಂಸ್ಥೆಯನ್ನು ಮುಚ್ಚಿ ಹಾಕುವ ಹುನ್ನಾರದಿಂದ ಸ್ಥಳೀಯ ಕೆಲವರು ಸುಳ್ಳು ಕಥೆ ಕಟ್ಟಿ ಸಲ್ಲಿಸಿರುವ ದೂರನ್ನು ಗಂಭಿರವಾಗಿ ಪರಿಗಣಿಸದೆ ತಿರಸ್ಕರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.