ಕೊರಗರ ಕಾಲನಿಯಲ್ಲಿ ಮತದಾನ ಜಾಗೃತಿ
ಬಂಟ್ವಾಳ: ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ಸಮಿತಿ, ಬಂಟ್ವಾಳ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗರ ಕಾಲನಿಯಲ್ಲಿ ಮತದಾನ ಜಾಗೃತಿ ಅಭಿಯಾನ ಭಾನುವಾರ ನಡೆಯಿತು.
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ವಿಶ್ವನಾಥ್ ಬಿ. ಮಾತನಾಡಿ, ಯಾವುದೇ ಆಮಿಷ, ಆಸೆಗಳಿಗೆ ಬಲಿಯಾಗದೇ ಮತ ಹಾಕಬೇಕು. ಮತದಾನ ನಮ್ಮ ಆದ್ಯ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಅರ್ಹ ವ್ಯಕ್ತಿಯನ್ನು ಚುನಾಯಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಾಲೂಕು ಪಂಚಾಯತ್ ವ್ಯವಸ್ಥಾಪಕ ಪ್ರಕಾಶ್, ಸ್ವೀಪ್ ತಾಲೂಕು ತರಬೇತುದಾರರಾದ ಸುರೇಖಾ, ಸ್ವೀಪ್ ಸಮಿತಿ ಸದಸ್ಯ ಪ್ರದೀಪ್ ಕಾಮತ್, ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರವೀಣ್ ಇತರರು ಭಾಗವಹಿಸಿದ್ದರು.