ಪಂಪ್ ಸೆಟ್ ಗಳ ವಿದ್ಯುತ್ ಕಡಿತ ಜಿಲ್ಲಾಧಿಕಾರಿಯವರ ಕ್ರಮ ಖಂಡಿಸಿ ರೈತರ ಹಠಾತ್ ಪ್ರತಿಭಟನೆ
ಬಂಟ್ವಾಳ: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಕೊರತೆಯಾಗುತ್ತಿದೆ ಎಂಬ ನೆಪದಲ್ಲಿ ನೇತ್ರಾವತಿ ನದಿ ಪಾತ್ರದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತ ಮಾಡಲು ಆದೇಶಿಸಿರುವ ಜಿಲ್ಲಾಧಿಕಾರಿಯವರ ಕ್ರಮವನ್ನು ಖಂಡಿಸಿ ರೈತರು ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಶುಕ್ರವಾರ ಹಠಾತ್ ಪ್ರತಿಭಟನೆ ನಡೆಸಿದರು.
ರೈತರ ಮನವಿಯ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಪ್ರತಿಭಟನಾ ಸ್ಥಳಕ್ಕಾಗಮಿಸಿ, ರೈತರ ಬೇಡಿಕೆಗಳನ್ನು ಆಲಿಸಿ ಮಂಗಳೂರು ಸಹಾಯಕ ಆಯುಕ್ತರಿಗೆ ಕರೆ ಮಾಡಿ ರೈತರ ಸಮಸ್ಯೆ ಯನ್ನು ಗಮನಕ್ಕೆ ತಂದರು.
ತಹಶೀಲ್ದಾರ್ ಅರ್ಚನಾ ಭಟ್ ಅವರು ಪ್ರತಿಭಟನಾ ಸ್ಥಳಕ್ಕಾಗಮಿಸಿ ಶಾಸಕರ ಜೊತೆ ಸಮಾಲೋಚನೆ ನಡೆಸಿದರು.
ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ನಮ್ಮ ಯಾವುದೇ ಆಕ್ಷೇಪ,ತಕರಾರು ಇಲ್ಲ,ಆದರೆ ಬಂಟ್ವಾಳ ಭಾಗದ ರೈತರನ್ನು ಬಲಿ ಕೊಡುವ ಜಿಲ್ಲಾಡಳಿತದ ಅಸಮಂಜಸ ತೀರ್ಮಾನಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ ಎಂದು ಶಾಸಕರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ರೈತರು ನೇತ್ರಾವತಿ ನದಿ ನೀರು ಉಪಯೋಗಿಸಬಾರದೆಂದಾರೆ ಮಂಗಳೂರು ನಗರದಲ್ಲಿ ಕುಡಿಯುವ ನೀರು ಹೊರತು ಪಡಿಸಿ ಉಳಿದ ಎಲ್ಲಾ ನೀರಿನ ಸಂಪರ್ಕಗಳನ್ನು ನಿಯಂತ್ರಿಸಬೇಕು, ಪರಿಸ್ಥಿತಿಯನ್ನು ಅರಿತುಕೊಂಡು ರೈತರ ಪರವಾಗಿ ತೀರ್ಮಾನ ಕೈಗೊಳ್ಳುವಂತೆ ಮನವರಿಕೆ ಮಾಡಿ ಇಲ್ಲದಿದ್ದರೆ ನಾವು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿಯೂಂದಿಗೂ ಚರ್ಚಿಸಿದ್ದೆನೆ ಎಂದು ತಹಶೀಲ್ದಾರ್ ಅವರಿಗೆ ಶಾಸಕರು ತಿಳಿಸಿದರು.
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಪ್ರಮುಖರಾದ ಸುದರ್ಶನ ಬಜ,ದೇವಪ್ಪ ಪೂಜಾರಿ, ಗಣೇಶ್ ರೈ ಮಾಣಿ, ರಾಮ್ ದಾಸ್ ಬಂಟ್ವಾಳ, ಮೋನಪ್ಪದೇವಸ್ಯ, ಸುರೇಶ್ ಕೋಟ್ಯಾನ್, ಎ.ಗೋವಿಂದ ಪ್ರಭು, ವಿಠಲ ಅಲ್ಲಿಪಾದೆ, ಸದಾನಂದ ನಾವೂರ, ರೊನಾಲ್ಡ್ ಡಿ.ಸೋಜ, ಶಶಿಕಾಂತ್ ಶೆಟ್ಟಿ ಮತ್ತಿರರು ಉಪಸ್ಥಿತರಿದ್ದರು.